ನಗರಸಭೆಯ ನಾಲ್ವರು ಪೊಲೀಸರ ವಶಕ್ಕೆ

449

ಬಳ್ಳಾರಿ/ಹೊಸಪೇಟೆ: ಸ್ಥಳೀಯ ನಗರಸಭೆಯಿಂದ ಅಕ್ರಮವಾಗಿ ಖಾತಾ ಬದಲಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಗರಸಭೆಯ 7 ಜನ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಖಾತಾ ಬದಲಾವಣೆ ಮಾಡಿದ ದೂರಿನ ಹಿನ್ನಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ನಗರಸಭೆಗೆ ದಿಡೀರ್ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಕಡತಗಳ ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ಅಕ್ರಮವೆಸಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ನಗರಸಭೆಯ ಪೌರಾಯುಕ್ತ ಸೇರಿದಂತೆ ನಗರಸಭೆ ಕಂದಾಯ ವಿಭಾಗದ ಒಟ್ಟು 14 ಜನ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಾಮೂಹಿಕ ವರ್ಗಾವಣೆ ಮಾಡಿದ್ದರು. ಅಲ್ಲದೆ ಸಹಾಯಕ ಆಯುಕ್ತ ಪ್ರಶಾಂತ ಕುಮಾರ್ ಮಿಶ್ರಾ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡ ಸೋಮವಾರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದೆ.

ಅಲ್ಲದೆ ಸ್ಥಳೀಯ ನೆಹರೂ ಕಾಲೋನಿ ನಿವಾಸಿಗಳಾದ ಪುಷ್ಟಾ ಹಾಗೂ ಶಿಲ್ಪಾ ನಾಡಿಗೇರ್ ಕೊಂಡಯ್ಯ ಎಂಬುವವರು ತಮಗೆ ಸೇರಿದೆ ಆಸ್ತಿಯನ್ನು ಬೇರೆಯವರು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳಲು ಯತ್ನ ನಡೆಸಿದ್ದಾರೆ ಎಂದು ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರು.

ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪಟ್ಟಣ ಠಾಣೆಯಲ್ಲಿ ಮಂಗಳವಾರ ಅಕ್ರಮವಾಗಿ ಖಾತಾ ಬದಲಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರಸಭೆಯ 7 ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು. ಸದರಿ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಈಗಾಗಲೇ ಪಟ್ಟಣ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು. ಉಳಿದವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಇನ್ನು ಹಲವಾರು ಅಧಿಕಾರಿಗಳು ಸಿಬ್ಬಂದಿ ಭಾಗಿಯಾಗಿರುವ ಸಂಶಯದ ಹಿನ್ನಲೆಯಲ್ಲಿ ಹಲವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.

ಅಕ್ರಮ ಖಾತಾ ಬದಲಾವಣೆ: ನಗರಸಭೆ ಸದಸ್ಯರ ನಿವಾಸದ ಮೇಲೆ ಪೊಲೀಸರ ದಾಳಿ ಹೊಸಪೇಟೆ.ಏ.12 ಅಕ್ರಮ ಖಾತಾ ಬದಲಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ನಗರಸಭೆ ಸದಸ್ಯರ ನಿವಾಸದ ಮೇಲೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.

ಸ್ಥಳೀಯ ನಗರಸಭೆಯಿಂದ ಅಕ್ರಮವಾಗಿ ಖಾತಾ ಬದಲಾವಣೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಟ್ಟಣ ಠಾಣೆ ಪೊಲೀಸರು ನಗರಸಭೆಯ 6ನೇ ವಾರ್ಡಿನ ಸದಸ್ಯ ಡಿ.ವೇಣುಗೋಪಾಲ, ಹಾಗೂ 22ನೇ ವಾರ್ಡಿನ ಸದಸ್ಯ ಕೆ.ಮಲ್ಲಪ್ಪ ನಿವಾಸದ ಮೇಲೆ ಇಂದು ಬೆಳಿಗ್ಗೆ 11-30 ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದು. ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಡಿವೈಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಜರುಗಿದ ದಾಳಿಯಲ್ಲಿ ಪಟ್ಟಣ ಠಾಣೆ ಪಿ.ಐ.ಲಿಂಗನಗೌಡ ನೆಗಳೂರು ಮತ್ತವರ ಸಿಬ್ಬಂದಿ ಭಾಗವಹಿಸಿದ್ದರು. ನಗರಸಭೆಯಿಂದ ಅಕ್ರಮವಾಗಿ ಖಾತಾ ಬದಲಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್, ಪೌರಾಯುಕ್ತ ಸೇರಿದಂತೆ 14 ಜನ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಾಮೂಹಿಕ ವರ್ಗಾವಣೆ ಮಾಡಿದ್ದಾರೆ. ಅಲ್ಲದೆ 7 ಜನರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಿರುವ ಪೊಲೀಸರು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.