ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

439

ಬೆಂಗಳೂರು/ಮಹದೇವಪುರ: ಕಾಡಗುಡಿ ರೈಲ್ವೆ ಗೇಟ್ ಬಳಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಸ್ಥಳೀಯರ ಬಹುದಿನಗಳ ಬೇಡಿಕೆಯಾದ ರೈಲ್ವೆ ಕೆಳ ಸೇತುವೆ ನಿರ್ಮಾಣ ಮಾಡುವ ಸಂಬಂಧ ರೈಲ್ವೆ ಅಧಿಕಾರಿಗಳೊಂದಿಗೆ ಶಾಸಕ ಅರವಿಂದ ಲಿಂಬಾವಳಿ ಸ್ಥಳ ಪರಿಶೀಲನೆ ನಡೆಸಿದರು.

ಮಹದೇವಪುರ ಕ್ಷೇತ್ರದ ಕಾಡುಗುಡಿ ಬಳಿಯ ರೈಲ್ವೆ ಕ್ರಾಸಿಂಗ್ ಇರುವ ರಸ್ತೆ ಕಿರಿದಾಗಿದ್ದು, ರೈಲ್ವೆ ಮಾರ್ಗದಲ್ಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ಗಾಡಿಗಳು ಸೇರಿದಂತೆ ದಿನನಿತ್ಯ 50 ಕ್ಕೂ ಹೆಚ್ಚು ರೈಲುಗಳು ಈ ಮಾರ್ಗದಲ್ಲಿ ಸಂಚರಿಸುವ ಹಿನ್ನೆಲೆ ರಸ್ತೆ ಗೇಟ್ ಹಾಕುವುದು ಅನಿವಾರ್ಯವಾಗಿದೆ, ಇದರಿಂದ ಹೆಚ್ಚು ಸಮಯ ವಾಹನ ಸವಾರರು ರೈಲು ಸಾಗುವ ತನಕ ಕಾಯಬೇಕಿತ್ತು, ಇದು ಸ್ಥಳೀಯರಿಗೆ ತೀವ್ರ ಸಂಕಷ್ಟ ಪಡುವಂತಾಗಿತ್ತು. ಹಲವು ವರ್ಷಗಳಿಂದ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲಾಗದೆ ಪರದಾಡುವಂತಾಗಿತ್ತು,

ರೈಲ್ವೆ ಕ್ರಾಸಿಂಗ್ ರಸ್ತೆಯು ಚನ್ನಸಂದ್ರ, ಚಿಕ್ಕತಿರುಪತಿ, ದೇವನಗುಂದಿ, ಹೊಸಕೋಟೆ, ವೈಟ್ಫೀಲ್ಡ್ ಸೇರಿದಂತೆ ಇನ್ನಿತರೇ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ, ಈ ಭಾಗದಲ್ಲಿ ಹಲವು ಕೈಗಾರಿಕೆಗಳು, ಸಾಫ್ಟ್ವೇರ್ ಸಂಸ್ಥೆಗಳು ಮತ್ತು ಶಾಲಾ ಕಾಲೇಜುಗಳಿದ್ದು, ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಅಸಾಧ್ಯವಾಗಿಸಿತ್ತು, ಇದು ಸ್ಥಳೀಯರಿಗೆ ಗಂಭೀರ ಸಮಸ್ಯೆಗೆ ಪರಿಣಮಿಸಿದ್ದು, ಪರಿಹಾರಕ್ಕೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು.

ಸ್ಥಳೀಯ ಜನತೆ ಸಮಸ್ಯೆಯ ಕುರಿತು ಆಡಳಿತ ಸಂಸ್ಥೆಗಳಿಗೆ ಹಲವು ಬಾರಿ ದೂರು ಮನವಿ ನೀಡುತ್ತಾ ಬಂದರಾದರೂ ಪರಿಹಾರ ದೊರಕಿರಲಿಲ್ಲ, ಇಂದು ಸಮಸ್ಯೆಗೆ ಪರಿಹಾರವಾಗಿ ಕೆಳಸೇತುವೆ ನಿರ್ಮಾಕಮಲಣಕ್ಕೆ ಪಾಲಿಕೆ ಸಮ್ಮತಿ ಸೂಚಿಸಿದೆ.

ಕೆಳ ಸೇತುವೆ ಕಾಮಗಾರಿಗೆ ರೈಲ್ವೆ ಇಲಾಖೆಯಿಂದ ಅರ್ಧದಷ್ಟು ಮತ್ತು ಪಾಲಿಕೆ ಅರ್ಧದಷ್ಟು ಅನುದಾನ ನೀಡಲಿದ್ದು,

ಸುಮಾರು 11.50ಕೋಟಿ ಅನುದಾನ ಕಾಮಗಾರಿಗೆ ಮೀಸಲಿರಿಸಿದ್ದು, ಕಾಮಗಾರಿ ನಡೆಸುವ ಹಿನ್ನೆಲೆ ಕ್ಷೇತ್ರ ಶಾಸಕ ಅರವಿಂದ ಲಿಂಬಾವಳಿ ಶನಿವಾರ ಸ್ಥಳ ಪರಿಶೀಲನೆ ನಡೆಸಿ ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದೆಂದು ತಿಳಿಸಿದ್ದಾರೆ.

ರೈಲ್ವೆ ಕ್ರಾಸಿಂಗ್ ರಸ್ತೆಯನ್ನು ತಾತ್ಕಾಲಿಕವಾಗಿ ಕಾಮಗಾರಿ ಮುಗಿಯುವ ವರೆಗೂ ಮುಚ್ಚಲಿದ್ದು, 100 ಮೀ.ಗಳ ಅಂತರದಲ್ಲೇ ವಾಹನ ಸವಾರರಿಗೆ ಸಂಚರಿಸಲು ತಾತ್ಕಾಲಿಕ ರಸ್ತೆ ಸೃಷ್ಟಿಸಿ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಚಲಿಸಲು ಅವಕಾಶ ಮಾಡಿಕೊಡಲಾಗುವುದು, ಲಘು ವಾಹನಗಳು ವೈಟ್ಫೀಲ್ಡ್ ಮುಖ್ಯರಸ್ತೆಯನ್ನು ಸಂಚಾರಕ್ಕೆ ಬಳಸುವ ಮೂಲಕ ಕೆಳ ಸೇತುವೆ ಕಾಮಗಾರಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್, ರೈಲ್ವೆ ಮುಖ್ಯ ಅಭಿಯಂತರ ಹರಿಬಾಬು, ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಅಶ್ವಥ್ ನಾರಾಯಣ್ ರೆಡ್ಡಿ, ಅಸ್ಲಂ ಪಾಷಾ, ಹೂಡಿ ಪಿಳ್ಳಪ್ಪ ಸೇರಿದಂತೆ ಮತ್ತಿತರರಿದ್ದರು.