ವಿರೂಪಾಕ್ಷನಿಗೂ ಶೆಖೆ.

251

ಬಳ್ಳಾರಿ/ಹೊಸಪೇಟೆ:ಬಿಸಿಲ ಧಗೆ ಆ ಹಂಪಿ ವಿರೂಪಾಕ್ಷನಿಗೂ ಬಾಧಿಸುತ್ತಿದೆ. ಹೀಗಾಗಿ ದಿನದ ಇಪ್ಪತ್ತು ನಾಲ್ಕು ಗಂಟೆ ತನ್ನ ಶಿರಕ್ಕೆ ಬೆಳ್ಳಿಯ ಕವಚ ಧರಿಸುತ್ತಿದ್ದ ಹಂಪಿ ವಿರೂಪಾಕ್ಷ ಇನ್ನು ಮುಂದೆ ಬಿಸಿಲ ತಾಪ ತಾಳದೇ ಕವಚವನ್ನು ತೆಗೆದು ಶೀತ ಕುಂಭದಿಂದ ತಂಪಿನ ಅನುಭವ ಪಡೆಯುತ್ತಿದ್ದಾನೆ.

ಹೌದು…ಬಿಸಿಲನಾಡಿನ ರಾಜಧಾನಿ ಬಳ್ಳಾರಿಯ ಬಿಸಿಲು ಮತ್ತು ಧಗೆಯ ಶೆಖೆಯ ಕರಾಮತ್ತೇ ಅಂಥದ್ದು. ಜನ-ಜಾನುವಾರುಗಳು ಸೇರಿದಂತೆ ಸಕಲ ಚರಾಚರ ಜೀವರಾಶಿಗಳು ಬಳ್ಳಾರಿಯ ಬಿಸಿಲಿಗೆ ಉಸ್ಸಪ್ಪಾ ಅಂತ ಉಸಿರು ಹಾಕುತ್ತಾರೆ. ಇದಕ್ಕೆ ಹಂಪಿ ವಿರೂಪಾಕ್ಷನೂ ಹೊರತಲ್ಲ. ಕೋಟ್ಯಾಂತರ ಭಕ್ತರ ಆರಾಧ್ಯ ದೈವನಾದ ಶಿವನಿಗೂ ಶೆಖೆ ತಾಳದಾಗಿದೆ. ವೈಶಾಖ ಶುದ್ಧ ಪಂಚಮಿಯಿಂದ ಹಿಡಿದು ಜ್ಯೇಷ್ಠ ಶುದ್ಧ ಪಂಚಮಿವರೆಗೂ ಹಂಪಿ ವಿರೂಪಾಕ್ಷನಿಗೆ ಶೀತಕುಂಭದಿಂದ ಸಲಿಲ ಧಾರೆಯನ್ನು ಎರೆಯಲಾಗುತ್ತಿದೆ. ಧಾರಣಾ ಪಾತ್ರೆಯಲ್ಲಿ ತುಂಗಭದ್ರೆಯ ಉದಕದಿಂದ ಭಕ್ತಿಪ್ರಿಯನಾದ ಹಂಪಿ ವಿರೂಪಾಕ್ಷ ಶೀತಕುಂಭದ ತಂಪನೆಯ ಅನುಭೂತಿ ಪಡೆಯುತ್ತಿದ್ದಾನೆ. ಈ ಒಂದು ತಿಂಗಳು ಪರ್ಯಂತ ಸಂಪ್ರದಾಯದಂತೆ ಶಿವನಿಗೆ ಉಷ್ಣ ಕಡಿಮೆ ಆಗಲಿ ಎಂಬ ಉದ್ದೇಶದಿಂದ ಅರ್ಚಕರು ಶೀತಕುಂಭದ ಧಾರೆ ಎರೆಯುತ್ತಿದ್ದಾರೆ.

ಪುರಾಣ ಕಾಲದಿಂದಲೂ ಇದು ಪ್ರಚಲಿತದಲ್ಲಿದ್ದು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ಇದು ಸಂಪ್ರದಾಯದಂತೆ ಮುಂದುವರಿದು ಬಂದಿದೆ. ಹಂಪಿಯ ಶ್ರೀ ಶೃಂಗೇರಿ ಶಂಕರಮಠದ ಪ್ರಸ್ತುತ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತೀ ತೀರ್ಥ ಸ್ವಾಮೀಜಿಗಳ ದಿವ್ಯ ಸಲಹೆ ಮೇರೆಗೆ ಪ್ರಧಾನ ಅರ್ಚಕರಾದ ಜೆ.ಎಸ್.ಮುರಳೀಧರ ಶಾಸ್ತ್ರಿ, ಟಿ.ಶ್ರೀನಾಥ್ ಶರ್ಮಾ ಮತ್ತು ಜೆಎಸ್ ಶ್ರೀನಾಥ ಶರ್ಮಾ ಅವರು ಈ ವಿಧಾನೋಕ್ತ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಪ್ರತಿನಿತ್ಯ ಬೆಳಿಗ್ಗೆ 6-30 ರಿಂದ ಮಧ್ಯಾಹ್ನ 12-30ರವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಂಪಿ ವಿರೂಪಾಕ್ಷನ ಬಾಗಿಲು ತೆರೆದಿರುತ್ತದೆ. ದಿನಾಲೂ ಪಂಚಾಮೃತ, ರುದ್ರಾಭಿಷೇಕ, ನೈವೇದ್ಯ, ಬಲಿಹರಣ ಪೂಜೆ ನೆರವೇರಿಸುವ ರೂಢಿ ಇದೆ. ಬಳಿಕ ವಿದ್ಯಾರಣ್ಯರ ಕಾಲದಿಂದ ನಡೆದು ಬಂದ ಸಂಪ್ರದಾಯಂತೆ ವಿದ್ಯಾರಣ್ಯರ ಪಾದುಕೆ ಸೇವೆಯೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ನಡೆಸುವ ಪದ್ಧತಿಯೂ ಸಹ ಇಲ್ಲಿ ಜಾರಿಯಲ್ಲಿದೆ. ಜಗತ್ತಿನ ಬೇರಾವ ತಾಣದಲ್ಲೂ ಶಿವನಿಗೆ ಪ್ರತಿನಿತ್ಯ ಹೋಳಿಗೆ ನೈವೇದ್ಯ ಇರುವುದಿಲ್ಲ. ಇಲ್ಲಿ ಮಾತ್ರ ಪ್ರತಿನಿತ್ಯ ಹೋಳಿಗೆ ನೈವೇದ್ಯ, ಚಿತ್ರಾನ್ನ, ಪಾಯಸ ಅರ್ಪಿಸಿ ಪೂಜೆ ನೆರವೇರಿಸಲಾಗುತ್ತಿದೆ. ಒಟ್ನಲ್ಲಿ, ಈ ಒಂದು ತಿಂಗಳು ಹಂಪಿ ವಿರೂಪಾಕ್ಷನಿಗೆ ಉಷ್ಣ ಕಡಿಮೆಯಾಗಿ ಶಿವನ ಶಿರ ತಂಪಾಗಲಿ ಎಂಬ ಕಾರಣಕ್ಕೆ ಶೀತಕುಂಭದ ಸೇವೆ ಹಂಪಿಯಲ್ಲಿ ಜಾರಿಯಲ್ಲಿದೆ.