ಹಂಪಿಯಲ್ಲಿ ವಿದೇಶಿಗರ ದರಬಾರು

262

ಬಳ್ಳಾರಿ /ಹೊಸಪೇಟೆ: ವಿಶ್ವಪ್ರಸಿದ್ಧ ಹಂಪಿಯಲ್ಲಿ ವಿದೇಶಿಗರ ದರಬಾರು ಜೋರಾಗಿದೆ. ಇತ್ತೀಚೆಗೆಷ್ಟೇ ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದೊಳಗೆ ವಿದೇಶಿಗ ಬೀರ್ ಬಾಟಲಿ ಹಿಡಿದು ಅಲ್ಲಿಯೇ ಕುಡಿದು ಅನಾಚಾರವೆಸಗಿದ್ದ. ಚಪ್ಪಲಿ ಹಾಕಿಕೊಂಡು ದೇವಸ್ಥಾನದ ಆವರಣದೊಳಗೆ ಓಡಾಡುತ್ತಿದ್ದ ದೃಶ್ಯ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಹಂಪಿಯ ನೂರಾರು ಸ್ಮಾರಕಗಳನ್ನು ನೋಡಲು ಆಗಮಿಸುವ ವಿದೇಶಿಗರು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ವರ್ತಿಸುತ್ತಿದ್ದಾರೆ. ಹಂಪಿಯ ದೇವಸ್ಥಾನದ ಮೇಲ್ಭಾಗದ ಹೇಮಕೂಟದಲ್ಲಿರುವ ಕಲ್ಲು, ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಗುಡ್ಡದ ಮೇಲೆ ಆಧಾರವಿಲ್ಲದೆ ನಿಂತಿರುವ ಕಂಬಗಳ ಮೇಲೆತ್ತಿ ಫೋಟೋ ಫೋಸು ಕೊಡುತ್ತಿದ್ದಾರೆ. ಅಪ್ಪತಪ್ಪಿ ಮೇಲಿಂದ ಬಿದ್ದರೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹೇಮಕೂಟ ಪ್ರದೇಶದಲ್ಲಿ ಕಾವಲಿಗೆ ಇರುವುದು ಒಬ್ಬೇ ಒಬ್ಬ ಸೆಕ್ಯೂರಟಿ. ಸುತ್ತಮುತ್ತಲೂ ಹಲವಾರು ಸ್ಮಾರಕಗಳು ಇದ್ದು, ಇವುಗಳನ್ನು ನೋಡಲು ಬರುವ ಪ್ರವಾಸಿಗರನ್ನು ಕಾಯುವುದು ಒಬ್ಬ ಸೆಕ್ಯೂರಟಿಯಿಂದ ಕಷ್ಟವಾಗುತ್ತಿದೆ. ಇದೇ ರೀತಿ ತೆರೆದ ಮ್ಯೂಸಿಯಂನಂತಿರುವ ಹಂಪಿಯಲ್ಲಿ ಸಾಕಷ್ಟು ಅನೈತಿಕ ಚಟುವಟಿಕೆ ನಡೆಯುತ್ತಿದೆ. ವಿದೇಸಿಗರ ಆಟಾಟೋಪಕ್ಕೆ ಬ್ರೇಕ್ ಹಾಕಬೇಕು, ಕಾವಲುಗಾರರನ್ನು ಹೆಚ್ಚಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.