ಬರಿದಾದ ಫಾಲ್ಸ್, ಪ್ರವಾಸಿಗರಲ್ಲಿ ಬೇಸರ

508

ಬಳ್ಳಾರಿ /ಹೊಸಪೇಟೆ:ಹಂಪಿಯ ಸುಂದರ ಬೆಟ್ಟ-ಗುಡ್ಡ ನಡುವೆ ವರ್ಷವಿಡಿ, ಜಲನರ್ತನದಿಂದ ಪ್ರವಾಸಿಗರನ್ನು ತನ್ನತ್ತ ಸಳೆಯುತ್ತಿದ್ದ ಐತಿಹಾಸಿಕ ಹಂಪಿಯ ವಾಟರ್ ಫಾಲ್ಸ್ ನೀರಿಲ್ಲದೇ ಬಣ ಗುಡಗುತ್ತಿದ್ದು, ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.

ಹಂಪಿಯಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಈ ವಾಟರ್ ಪಾಲ್ಸ್, ಸದಾ ಭೋರ್ಗರೆಯುವ ನೀರಿನಲ್ಲಿ ಹಾಲಿನ ನೊರೆಯಂತೆ ಹರಿಯುತ್ತಾ ನೈಸರ್ಗಿಕ ಕಲ್ಲು-ಗುಂಡುಗಳ ಸೌಂದರ‌್ಯದಿಂದ ಪ್ರವಾಸಿಗರ ಕಣ್ಮನವನ್ನು ತಣಿಸುತ್ತಿತ್ತು. ಕಲ್ಲು-ಗುಂಡುಗಳ ಮಧ್ಯದಲ್ಲಿ ಭೋರ್ಗರೆಯುವ ನೀರಿನಲ್ಲಿ ಕೆಲವರು ಮೋಜು ಮಾಡಿ ಸಂತಸ ಪಟ್ಟರೆ, ಇನ್ನೂ ಕೆಲವರು, ಕಲ್ಲು-ಬಂಡೆಗಳ ಮೇಲೆ ನಿಂತು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಪ್ರವಾಸಿಗರಿಗೆ ಈ ಭಾಗ್ಯ ಇಲ್ಲದಂತಾಗಿದೆ.

ನೀರು ನಾಯಿ, ವಿವಿಧ ಜಾತಿ ಪಕ್ಷಿ ಸಂಕುಲಗಳನ್ನು ಫಾಲ್ಸ್ ತನ್ನ ಮಡಿಲಲ್ಲಿ ಜೋಪಾನ ಮಾಡುತ್ತಿತ್ತು. ಬೆಟ್ಟ-ಗುಡ್ಡಗಳ ಸುಂದರ ಪ್ರಕೃತಿ ಮಡಿಲಿನಲ್ಲಿರುವ ವಾಟರ್ ಫಾಲ್ಸ್ ವೀಕ್ಷಣೆಗೆ ಪ್ರತಿಯೊಬ್ಬರು ಬಂದು ಹೋಗುವುದು ವಾಡಿಕೆಯಾಗಿತ್ತು. ಕೆಲ ಪ್ರವಾಸಿಗರಿಗಂತು ವಾಟರ್ ಪಾಲ್ಸ್ ಮೋಜಿನ ತಾಣವೂ ಆಗಿತ್ತು. ಇದೀಗ ಈ ಬಾರಿ ತುಂಗಭದ್ರಾ ನದಿಯಲ್ಲಿ ನೀರಿಲ್ಲದೇ ಇರುವುದರಿಂದ ವಾಟರ್ ಪಾಲ್ಸ್‌ನ ಕಲ್ಲು-ಗುಂಡುಗಳು ನಗ್ನವಾಗಿದ್ದು, ಪ್ರವಾಸಿಗರಲ್ಲಿ ನಿರಾಸೆಭಾವನೆ ಉಂಟು ಮಾಡಿದೆ.

ಸಾಮಾನ್ಯವಾಗಿ ಹಂಪಿಗೆ ಬೇಟಿ ನೀಡುವ ಪ್ರವಾಸಿಗರು, ಈ ವಾಟರ್ ಫಾಲ್ಸ್‌ಗೆ ಬೇಟಿ ನೀಡದೇ ಮರಳುವುದಿಲ. ಅದರಲ್ಲಿ ವಿದೇಶಿ ಪ್ರವಾಸಿಗರಿಗೆ ಇದು ಅಚ್ಚು-ಮೆಚ್ಚಿನ ತಾಣವಾಗಿದೆ. ಪುನಃ ವಾಟರ್ ಫಾಲ್ಸ್ ಮೈದುಂಬಿಕೊಂಡು, ದೇಶ-ವಿದೇಶಿ ಪ್ರವಾಸಿಗರನ್ನು ತನ್ನ ಬರ ಮಾಡಿಕೊಳ್ಳುವಂತಾಗಲಿ ಎಂದು ಹಂಪಿಯ ಪ್ರವಾಸಿ ಮಾರ್ಗದರ್ಶಕರು ವರುಣನ ಆಗಮನವನ್ನು ಕಾಯುತ್ತಿದ್ದಾರೆ.