ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಬೇಸಿಗೆ ಶಿಬಿರ ಸಹಕಾರಿ 

266

ಚಿಕ್ಕಬಳ್ಳಾಪುರ/ಗುಡಿಬಂಡೆ: ಮಕ್ಕಳಲ್ಲಿ ಬೌದ್ದಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯ ಕ್ರಮಗಳೊಂದಿಗೆ ಯಶಸ್ವಿಯಿಂದ ಮುನ್ನಡೆಸಲು ಬೇಸಿಗೆ ಶಿಬಿರಗಳು ಪೂರಕವಾಗಲಿವೆ ಎಂದರು ಪ.ಪಂ. ಅಧ್ಯಕ್ಷ ಜಿ.ಎಸ್.ಚಂದ್ರಶೇಖರ ನಾಯ್ಡು ಅಭಿಪ್ರಾಯಪಟ್ಟರು.

ಪಟ್ಟಣದ ಬಿ.ಸಿ.ಎಂ ವಿದ್ಯಾರ್ಥಿನಿಲಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಸ್ಥಳೀಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ 10 ದಿನಗಳ ಉಚಿತ ತಾಲ್ಲೂಕು ಮಟ್ಟದ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಮಕ್ಕಳಲ್ಲಿರುವ ಕೌಶಲ್ಯತೆಯನ್ನು ಕುಗ್ಗಿಸದೇ ಉತ್ತಮ ವ್ಯಾಯಾಮ ಮತ್ತು ಮಾನಸಿಕ ಸ್ಥೈರ್ಯ ಮತ್ತು ಧೈರ್ಯ ತುಂಬುವ ದೇಸೀಯ ಆಟೋಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಮಹತ್ವ ವಹಿಸಬೇಕೆಂದು ಶಿಬಿರದ ಆಯೋಜಕರನ್ನು ಅಭಿನಂದಿಸಿದರು.

ಶಿಬಿರದಲ್ಲಿ ಮಾತನಾಡಿದ ಶಿಬಿರದ ಆಯೋಜಕ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಕೀಲ ಉನ್ನತಿ ವಿಶ್ವನಾಥ್ ನಮ್ಮ ಸಂಘದ ವತಿಯಿಂದ ತಾಲ್ಲೂಕಿನ ಗ್ರಾಮಾಂತರ ಬಡ ವಿದ್ಯಾರ್ಥಿಗಳಲ್ಲಿ ಪುಟಾಣಿಗಳಿಗೆ ಕಲೆ, ಸಾಹಿತ್ಯ, ವ್ಯಾಯಾಮ, ಯೋಗ, ಆರೋಗ್ಯ, ಸ್ವಚ್ಛತೆ, ಪರಿಸರ, ನೃತ್ಯ, ಚಿತ್ರಕಲೆ, ಇನ್ನಿತರ ಸೃಜನಾತ್ಮಕ ವಿಚಾರಗಳ ಕುರಿತು ಅರಿವು ಮೂಡಿಸುವ 10 ದಿನಗಳ ಶಿಬಿರವನ್ನು ಉಚಿತವಾಗಿ ನಡೆಸುತ್ತಿದ್ದೇವೆ. ಪ್ರತಿಯೊಂದು ಮಗು ಆರೋಗ್ಯದ ಬಗ್ಗೆ ಗಮನವಹಿಸಬೇಕು, ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ಮಹತ್ವ ನೀಡಿ ಸ್ಥಳೀಯವಾಗಿ ಲಭ್ಯವಿರುವ ಕಡಿಮೆ ಬೆಲೆಯ ಆರೋಗ್ಯಕರ ಹಣ್ಣು ಹಂಪಲು, ಪೌಷ್ಟಿಕ ಆಹಾರಗಳನ್ನು ಸೇವಿಸಿ ಜೊತೆಗೆ ವ್ಯಾಯಾಮ, ಆಟೋಟಗಳಲ್ಲಿ ತೊಡಗಿಸಿಕೊಂಡು ದಿನಕ್ಕೆ ಕನಿಷ್ಟ ೩ಲೀ ನೀರನ್ನು ಸೇವಿಸುವ ಮೂಲಕ ಸದೃಢವಾಗಿ ಬೆಳೆದು ಆರೋಗ್ಯದ ಕಡೆ ಕಾಳಜಿವಹಿಸಬೇಕೆಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಜಿ.ಎನ್. ಬೈರರೆಡ್ಡಿ, ಪ.ಪಂ. ಉಪಾಧ್ಯಕ್ಷೆ ಎಂ.ವೆಂಕಟಲಕ್ಷ್ಮಮ್ಮ, ಕಸಬಾ ರಾಜಸ್ವ ನಿರೀಕ್ಷಕ ನರಸಿಂಹಯ್ಯ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಿ.ಎನ್.ನರಸಿಂಹಮೂರ್ತಿ, ತಾಲ್ಲೂಕು ಬಿ.ಸಿ.ಎಂ ವಿಸ್ತರಣಾಧಿಕಾರಿ ಕೆ.ವಿ.ರಾಮಯ್ಯ, ಶಿಬಿರದ ತರಬೇತುದಾರರಾದ ಕೆ.ಎನ್.ಮನೋಹರ್, ಜಿ.ಕೆ.ಅಂಬರೀಷ್, ಜಿ.ಆರ್.ಮುನಿರಾಜು, ಎನ್.ಶ್ರೀನಿವಾಸ್, ನಾಗಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.