ಬಿಎಸ್ವೈ ಬಣಕ್ಕೆ ಪರೋಕ್ಷ ಉತ್ತರ ನೀಡಿದ ಈಶ್ವರಪ್ಪ

315

ರಾಯಚೂರು:ಬಿ.ಎಸ್.ಯಡಿಯೂರಪ್ಪ ಬಣದ ವಿರುದ್ಧ ಪರೋಕ್ಷವಾಗಿ ಉತ್ತರ ನೀಡಲು ಇಂದು ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಜಿಲ್ಲೆಗೆ ಭೇಟಿ ನೀಡಿರುವುದು ಉದಾಹರಣೆಯಂತೆ ಇಂದು ಕಂಡು ಬಂತು. ಒಂದು ಕಡೆ ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾ ವಿಶೇಷ ಕಾರ್ಯಕಾರಣಿ ಸಭೆ ನಡೆದರೆ, ಇತ್ತಕಡೆ ಬಿಜೆಪಿಯ ಮುಖಂಡ ಹಾಗೂ ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳ ಜೊತೆ ಜಿಲ್ಲಾ ಕಛೇರಿಯಲ್ಲಿ ಬರ ಪರಿಶೀಲನೆ ಸಭೆ ನಡೆಸುವ ಮೂಲಕ ಒಂದು ಬಣಕ್ಕೆ ನಾ ಬೇರೆ ಎಂಬ ಸಂದೇಶವನ್ನು ನೀಡಿದಂತಾಗಿದೆ ಎಂಬ ಮಾತುಗಳು ಕೇಳಿ ಬಂದವು.
ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾ ಕಾರ್ಯಕಾರಣಿ ಸಭೆಗೆ ಆಗಮಿಸದೇ ರಾಯಚೂರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಹಾಗೆಯೇ ಹೋಗಿದ್ದು, ಮತ್ತಷ್ಟು ಭಿನ್ನಮತಕ್ಕೆ ಪುಷ್ಠಿ ನೀಡಿದಂತಾಗಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದದ್ದು, ಗೊತ್ತಿದ್ದರೂ ಈಶ್ವರಪ್ಪನವರು ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯಕರ್ತರ ಜೊತೆ ತುಸು ಹೊತ್ತು ಚರ್ಚಿಸಿ ಹೋಗಿರುವುದು ಜಿಲ್ಲೆಯ ಬಿಎಸ್ವೈ ಬಣಕ್ಕೆ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಇನ್ನೂ ಜೀವಂತವಾಗಿದೆ ಎಂಬ ಸಂದೇಶವನ್ನು ಸಾರುವಂತಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಇದೇ ರೀತಿಯ ಜಿಲ್ಲಾ ಕಾರ್ಯಕಾರಣಿ ಸಭೆ ಹಮ್ಮಿಕೊಂಡಿದ್ದಾಗ ಕೆ.ಎಸ್.ಈಶ್ವರಪ್ಪ ನವರು ಜಿಲ್ಲೆಗೆ ಆಗಮಿಸಿ ಬರ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿಗಳ ಜೊತೆ ನಡೆಸಿದ್ದು, ಮತ್ತೊಮ್ಮೆ ನೆನಪಿಸುವಂತಿತ್ತು.