ಪ್ಲಾಸ್ಟಿಕ್ ಬಳಕೆ ನಿಷೇಧ

485

ಬಳ್ಳಾರಿ /ಹೊಸಪೇಟೆ : ತಾಲೂಕು ಆಡಳಿತದ ತೀರ್ಮಾನ ತಾಲೂಕಿನಾದ್ಯಂತ ಇಂದಿನಿಂದಲೇ ಪ್ಲಾಸ್ಟಿಕ್ ಬಳಕೆ ನಿಷೇಧ-ಮೇ.31 ರ ವರೆಗೆ ಪ್ಲಕ್ಸ್ ಗಳಿಗೆ ಅವಕಾಶನಗರ ಸೇರಿದಂತೆ ತಾಲೂಕಿನಾದ್ಯಂತ ಇಂದಿನಿಂದಲೇ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಪ್ಲೆಕ್ಸ್ ಗಳಿಗೆ ಮೇ.31 ರ ವರೆಗೆ ಅವಕಾಶ ನೀಡಲಾಗಿದೆ.ಸ್ಥಳೀಯ ನಗರಸಭೆ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಜರುಗಿದ ಕಿರಾಣಿ ವರ್ತಕರು ಹಾಗೂ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಹಾಯಕ ಆಯುಕ್ತರು ಹಾಗೂ ಪ್ರಭಾರಿ ಪೌರಾಯುಕ್ತರು ಆದ ಪ್ರಶಾಂತ್ ಕುಮಾರ್ ಮಿಶ್ರಾ ತಾಲೂಕಿನಾದ್ಯಂತ ಬುಧವಾರದಿಂದ ಪ್ಲಾಸ್ಟಿಕ್ ವಸ್ತುಗಳಾದ ಬ್ಯಾಗ್, ಬ್ಯಾನರ್, ಕ್ಯಾರಿಬ್ಯಾಗ್, ಬಂಟಿಂಗ್ಸ್, ಕಪ್, ಸೇರಿದಂತೆ ಇನ್ನಿತರ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ಲಕ್ಸ್ ಗಳಿಗೆ ಮಾತ್ರ ಮೇ.31 ರ ವರೆಗೆ ಅವಕಾಶ ನೀಡಲಾಗಿದೆ. ನಗರ ಸೇರಿದಂತೆ ತಾಲೂಕಿನಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಸರ್ಕಾರದ ಆದೇಶದ ಪ್ರಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದರು.ತಹಸೀಲ್ದಾರ್ ಹೆಚ್.ವಿಶ್ವನಾಥ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ತಾಲೂಕಿನಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರೊಂದಿಗೆ ಈಗಾಗಲೇ ಹಲವಾರು ಬಾರಿ ಸಭೆಗಳನ್ನು ನಡೆಸಿ, ಎಚ್ಚರಿಕೆ ನೀಡಲಾಗಿದೆ. ಸರ್ಕಾರದ ಆದೇಶ ಇಂದಿನಿಂದಲೇ ಜಾರಿಯಾಗಲಿದೆ. ಯಾವುದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ವಸ್ತುಗಳು ಮಾರಾಟ ಮಾಡುವುದು ಕಂಡು ಬಂದರೆ, ಅಂತಹ ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುವ ಜೊತೆಗೆ ಮಾರಾಟಗಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಲಿನ ಪಾಕೆಟ್ ಗಳನ್ನು ಹೊರತುಪಡಿಸಿ, ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣ ನಿಷೇಧ ಮಾಡಲಾಗಿದೆ. ರಿಟೇಲ್ ಮತ್ತು ಹೋಲ್ ಸೇಲ್ ಅಂಗಡಿಗಳ ಮೇಲೆ ಸಹ ದಾಳಿ ನಡೆಸಲಾಗುವುದು. ಕದ್ದು-ಮುಚ್ಚಿ ಪ್ಲಾಸ್ಟಿಕ್ ಬಳಕೆ ಮಾಡುವವರ ಮತ್ತು ವಾಹನಗಳಲ್ಲಿ ಸಾಗಿಸುವವರ ಬಗ್ಗೆ ಮಾಹಿತಿ ನೀಡಿದರೆ, ಅಂತಹ ಅಂಗಡಿಗಳು ಮತ್ತು ವಾಹನಗಳ ಮೇಲೆ ದಾಳಿ ನಡೆಸಲಾಗುವುದು. ಮಾಹಿತಿ ನೀಡುವವರ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿಡಲಾಗುವುದು ಎಂದರು.ನಗರಸಭೆ ಅಧ್ಯಕ್ಷ ಎನ್.ಅಬ್ದುಲ್ ಖದೀರ್ ಮಾತನಾಡಿ, ನಗರದಲ್ಲಿ ಬುಧವಾರದಿಂದ ಎಲ್ಲಾ ಪ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ತೆರವು ಮಾಡಲಾಗುವುದು. ನಗರದಲ್ಲಿ ಪ್ಲೆಕ್ಸ್ ಹಾಕಿದ್ದು ಕಂಡು ಬಂದರೆ ಪ್ಲೆಕ್ಸ್ ಗಳನ್ನು ಮುದ್ರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೆ ನಗರದಲ್ಲಿ ಹಾಕಲಾಗಿರುವ ಪ್ಲೆಕ್ಸ್ ಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ಭಾಗವಹಿಸಿದ್ದ ಕಿರಾಣಿ ವರ್ತಕರ ಸಂಘದ ಪದಾಧಿಕಾರಿಗಳು, ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ತಮ್ಮ ಬೆಂಬಲ ಸೂಚಿಸಿದರು. ಅಲ್ಲದೆ ಸರ್ಕಾರದ ಆದೇಶದ ಪ್ರಕಾರ ಪ್ಲಾಸ್ಟಿಕ್ ವಸ್ತುಗಳ ನಿಷೇಧಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.ಪ್ಲೆಕ್ಸ್ ಅಂಗಡಿಗಳ ಮಾಲೀಕರಾದ ಅಪ್ಪಾರಾವ್ ಸಾನಬಾಳ್ ಹಾಗೂ ಸಂತೋಷ್ ಮಾತನಾಡಿ, ಪ್ಲೆಕ್ಸ್ ಗಳನ್ನು ನಿಷೇಧಿಸುವುದಾದರೆ ಎಲ್ಲಾ ಕಡೆ ನಿಷೇಧಿಸಿ, ಇದರಲ್ಲಿ ತಾರತಮ್ಯ ಮಾಡಬೇಡಿ. ನಮಗೂ ಪರಿಸರದ ಬಗ್ಗೆ ಕಾಳಜಿಯಿದೆ. ಪ್ಲೆಕ್ಸ್ ನಿಷೇಧ ಈಗಲೇ ಜಾರಿ ಮಾಡದೆ ಸ್ವಲ್ಪ ಕಾಲಾವಕಾಶ ಕೊಡಿ ಎಂದರು ಆದರೆ ಇದಕ್ಕೆ ಅಧಿಕಾರಿಗಳು ಒಪ್ಪಲಿಲ್ಲ. ಸರ್ಕಾರದ ಆದೇಶ ಮತ್ತು ಪರಿಸರ ಕಾಳಜಿ ದೃಷ್ಟಿಯಿಂದ ಇದು ಅನಿವಾರ್ಯವಾಗಿದ್ದು. ಇದಕ್ಕೆಸಹಕರಿಸಿಎಂದರು.ಸಭೆಯಲ್ಲಿನಿಷೇಧಕ್ಕೊಳಗಾಗಿರುವ ಪ್ಲಾಸ್ಟಿಕ್ ವಸ್ತುಗಳನ್ನು ಪ್ರದರ್ಶಿಸಲಾಯಿತು.ಸಭೆಯಲ್ಲಿ ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮನ್ಸೂರು ಅಹಮದ್, ಪರಿಸರ ಅಭಿಯಂತರರಾದ ಶಿಲ್ಪಶ್ರೀ, ಪರಿಸರ ಅಧಿಕಾರಿಗಳಾದ ನಾಗಭೂಷಣ ಹಿರೇಮಠ, ಚಂದ್ರಶೇಖರ್ ಸೇರಿದಂತೆ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಪಿ.ರಘುನಾಥ ಶೆಟ್ಟಿ, ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ರಘು ರಾಮುಲು, ತಿಪ್ಪೇಸ್ವಾಮಿ, ಛೇಂಬರ್ ಆಫ್ ಕಾಮರ್ಸ್ ನ ಅಬ್ದುಲ್ ಹಕ್ ಸೇಠ್, ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರು ಭಾಗವಹಿಸಿದ್ದರು