ತಮಿಳುನಾಡಿಗೆ ಒಲ್ಲದ ವಿಷ ಬೆಂಗಳೂರಿಗರಿಗೆ

226

ಬೆಂಗಳೂರು/ಮಹದೇವಪುರ:-ತಮಿಳುನಾಡಲ್ಲಿ ನಿಷೇಧಕ್ಕೊಳಗಾಗಿದ್ದ ಡೈಯಿಂಗ್(ಬಟ್ಟೆಗೆ ಬಣ್ಣ ಹಾಕುವ) ಘಟಕವು ವರ್ತೂರಿನಲ್ಲಿ ತಲೆಎತ್ತಿದ್ದು, ಅಂತರ್ಜಲ ಮತ್ತು ಪರಿಸರ ಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿದೆ.

ತಮಿಳುನಾಡಿನ ತಿರುಪ್ಪೂರ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಡೈಯಿಂಗ್ ಘಟಕಗಳಿದ್ದವು ಅವುಗಳಿಂದ ಕೆರೆ, ನದಿಗಳಿಗೆ ಕಂಟಕವಾಗಿತ್ತು, ಮದ್ರಾಸ್ ಹೈಕೋರ್ಟ್ ಈ ಡೈಯಿಂಗ್ ಯುನಿಟ್ಗಳನ್ನು ಮುಚ್ಚುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನೆಲೆ ಕಳೆದು ಕೊಂಡ ಡೈಯಿಂಗ್ ಯುನಿಟ್ಗಳು ನಗರದ ಹೊರ ವಲಯದಲ್ಲಿ ಮರುಹುಟ್ಟು ಪಡೆಯಲು ಹೊಂಚು ಹಾಕುತ್ತಿವೆ.
ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ತಲೆ ಎತ್ತಿರುವ ಈ ಘಟಕದಿಂದ ಅಂತರ್ಜಲ ಮತ್ತು ಪರಿಸರ ಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿದೆ. ಬೆಳ್ಳಂದೂರು ವರ್ತೂರಿನಲ್ಲಿ ಕೆರೆಗಳ ಸುತ್ತ ಕೆರೆಗೆ ಕಲುಷಿತ ತ್ಯಾಜ್ಯ ನೀರು ಬಿಡುತ್ತಿರುವ ಕಂಪನಿಗಳನ್ನು ಮುಚ್ಚುವಂತೆ ಎನ್ಜಿಟಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೆರೆಯ ಸುತ್ತಮುತ್ತಲಿರುವ ಕಾರ್ಖಾನೆಗಳನ್ನು ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿ ಕಾಟಾಚಾರಕ್ಕೆ ಕೆಲ ಕಾರ್ಖಾನೆಗಳಿಗೆ ಮಾತ್ರ ನೋಟಿಸ್ ನೀಡಿದೆ. ವರ್ತೂರಿನಲ್ಲಿ 6ತಿಂಗಳಿಂದ ಈ ಡೈಯಿಂಗ್ ಘಟಕ ಕಾರ್ಯನಿರ್ವಹಿಸುತ್ತಿದ್ದರೂ ಇದರ ಅರಿವಿಲ್ಲದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ಈಗಾಗಲೇ ನೊರೆ ಸಮಸ್ಯೆಯಿಂದ ಕೆರೆಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಗಳ ಪರಿಶೀಲನೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಬಟ್ಟೆಗೆ ಬಣ್ಣ ಹಾಕುವ ಘಟಕ ವರ್ತೂರು ಕೆರೆಯ ಅಂಚಿನಲ್ಲಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗಾಗಲೇ ತಮಿಳುನಾಡಿನಲ್ಲಿ ಈ ಘಟಕಗಳಿಂದ ಅಂತರ್ಜಲ ಕಲುಷಿತಗೊಂಡು ಕೆರೆ ನದಿಗಳು ಅಪಾಯದ ಅಂಚಿಗೆ ತಲುಪಿರುವುದ ರಿಂದ ಇಂಥಹ ಕಾರ್ಖಾನೆಗಳನ್ನು ಅಲ್ಲಿ ಸ್ಥಗಿತಗೊಳಿಸಲಾಗಿತ್ತು. ಅದೇ ಘಟಕಗಳು ಇಲ್ಲಿ ರಾಜಾರೋಷವಾಗಿ ಕಾರ್ಯ ನಿರ್ವಹಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವರ್ತೂರಿನಲ್ಲಿ ಘಟಕ ತಲೆ ಎತ್ತಿರುವುದರಿಂದ ಸ್ಥಳೀಯರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಮೂಲತಃ ತಮಿಳುನಾಡಿನ ಈ ಘಟಕ 6 ತಿಂಗಳ ಹಿಂದೆ ಪ್ರಾರಂಭಿಸಿದ್ದು, ಇದಕ್ಕಾಗಿ ಸ್ಥಳೀಯರಿಂದ ಭೂಮಿ ಬಾಡಿಗೆ ಪಡೆದು ಶೆಡ್ ನಿರ್ಮಿಸಿದ್ದಾರೆ. ಇಲ್ಲಿ ತಮಿಳುನಾಡು ನಿಂದ ಲಾರಿಯಲ್ಲಿ ಬರುವ ಕಚ್ಚಾ ಬಿಳಿ ಬಟ್ಟೆಯ ಥಾನುಗಳಿಗೆ ಬಣ್ಣ ಹಾಕುವ ಕೆಲಸ ನಡೆಯುತ್ತಿದ್ದು ಇದಕ್ಕೆ ದೊಡ್ಡ ಪ್ರಮಾಣದ ನೀರು ಮತ್ತು ಅನೇಕ ವಿಷಪೂರಿತ ರಾಸಾಯಾನಿಕ , ಆಸಿಡ್ ಬಳಕೆಯಾಗುವುದಲ್ಲದೆ, ಬಣ್ಣ ಹಾಕಿದ ಬಳಿಕ ಹೊರಬರುವ ರಾಸಾಯನಿಕ ಯುಕ್ತ ನೀರನ್ನು ವರ್ತೂರು ಕೆರೆ ರಾಜಕಾಲುವೆಗೆ ಬಿಡಲಾಗುತ್ತಿದೆ, ಈ ನೀರು ಅಕ್ಕಪಕ್ಕದ ಗ್ರಾಮದ ರೈತರು ಬೇಸಾಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ ವರ್ತೂರು ಸುತ್ತಮುತ್ತಲ ಪ್ರದೇಶದ ಜಾನುವಾರುಗಳು ಈ ಕಾಲುವೆ ದಂಡೆಯಲ್ಲಿ ಬೆಳೆದಿರುವ ಹುಲ್ಲನ್ನು ತಿನ್ನುತ್ತಿರುವುದರಿಂದ ಅವುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ವಿಷಯುಕ್ತ ನೀರಿನಿಂದ ಜಲಚರಗಳಿಗೂ ಅಪಾಯಕಟ್ಟಿಟ್ಟ ಬುತ್ತಿ, ಈ ರಾಸಾಯನಿಕ ನೀರು ಕಾಲುವೆಯುದ್ದಕ್ಕೂ ಹರಿದು ಹೊಸಕೋಟೆ ಮಾಲೂರು ತಾಲ್ಲೂಕು ಮೂಲಕ ಹೊಸೂರು ಸೇರುತ್ತಿದ್ದು, ರಾಜ್ಯದ ಕೆರೆಗಳಲ್ಲದೆ, ಪರ ರಾಜ್ಯದ ಜಲಮೂಲಕ್ಕೂ ಕಂಟಕ ಎದುರಾಗಿದೆ.