ಹೋರಾಟ ನಡೆಸುವ ಅಗತ್ಯವಿದೆ-ಸಂಸದ ಬಿ.ಶ್ರೀರಾಮುಲು

740

ಬಳ್ಳಾರಿ /ಹೊಸಪೇಟೆ : ತುಂಗಭದ್ರಾ ಜಲಾಶಯದ ಹೂಳೆತ್ತಲು ಪಕ್ಷಾತೀತ ಹೋರಾಟ ನಡೆಸುವ ಅಗತ್ಯವಿದೆ-ಸಂಸದ ಬಿ.ಶ್ರೀರಾಮುಲು ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಹೂಳೆತ್ತುವ ಕುರಿತು ಪಕ್ಷಾತೀತ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು. ತುಂಗಭದ್ರಾ ಜಲಾಯಶದ ಹಿನ್ನೀರಿನ ಪ್ರದೇಶದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಹೂಳೆತ್ತುವ ಸ್ಥಳಕ್ಕೆ ಇಂದು ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡಿದ ಅವರು, ಕಾವೇರಿ ವಿಷಯದ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟು ಸೂಚಿಸುವ ಹಾಗೆಯೇ ತುಂಗಭದ್ರಾ ಜಲಾಶಯದ ಹೂಳೆತ್ತುವ ವಿಷಯದಲ್ಲಿ ಸ್ಥಳೀಯ ಎಲ್ಲಾ ರಾಜಕೀಯ ಪಕ್ಷಗಳು, ರೈತರು, ಸಂಘ ಸಂಸ್ಥೆಗಳು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಹೋರಾಟ ರೂಪಿಸಬೇಕಾಗಿದೆ ಎಂದರು. ಈ ಹಿಂದೆ ತಾವು ಸಚಿವರಾಗಿದ್ದ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಹೂಳೆತ್ತುವ ಕುರಿತು ಕ್ಯಾಬಿನೆಟ್ ನಲ್ಲಿ ವಿಷಯ ಪ್ರಾಸ್ತಾಪ ಮಾಡಿದ್ದೆ. ಅಲ್ಲದೆ ಅಂದಿನ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಗಮನಕ್ಕೆ ತಂದಿದೆ. ಹಾಗೂ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದೆ. ಆದರೆ ನಮ್ಮ ಸರ್ಕಾರ ಬಿದ್ದು ಹೋದ ಹಿನ್ನಲೆಯಲ್ಲಿ ಹೋರಾಟ ಅಲ್ಲಿಗೆ ಸ್ಥಗಿತಗೊಂಡಿತ್ತು. ಆ ಹೋರಾಟಕ್ಕೆ ಮತ್ತೆ ರೈತ ಸಂಘದ ಪದಾಧಿಕಾರಿಗಳು ಚಾಲನೆ ನೀಡಿರುವುದು ಶ್ಲಾಘನೀಯ. ಸರ್ಕಾರ ತುಂಗಭದ್ರಾ ಜಲಾಶಯದ ಹೂಳೆತ್ತುವ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಕುರಿತು ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟ ರೂಪಿಸಲು, ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ರೈತ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುಂಗಭದ್ರಾ ಜಲಾಶಯದ ಹೂಳೆತ್ತುವ ವಿಷಯವನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲು ಮುಖಂಡರ ಮೇಲೆ ಒತ್ತಡ ತರಲಾಗುವುದು ಎಂದರು. ತುಂಗಭದ್ರಾ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಬೆಂಬಲ ಘೋಷಿಸಿದ್ದು. ಮೇ.29 ರಂದು ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ತಮ್ಮ ಬೆಂಬಲ ಸೂಚಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಮಾಜಿ ಶಾಸಕ ಎಸ್.ರತನ್ ಸಿಂಗ್, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ ಗೌಡ, ಹೊಸಪೇಟೆ ರೈತ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ, ಮುಖಂಡರುಗಳಾದ ಧರ್ಮೇಂದ್ರ ಸಿಂಗ್, ಬಿ.ಎಸ್.ಜಂಬಯ್ಯ ನಾಯಕ, ಕಿಚಿಡಿ ಶ್ರೀನಿವಾಸ, ವ್ಯಾಸನಕೇರಿ ಶ್ರೀನಿವಾಸ, ಜಂಬಾನಳ್ಳಿ ವಸಂತ, ಪಂತರ್ ಜಯಂತ್, ಮೈಲಾರಲಿಂಗ ನಾಯಕ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯರುಗಳು ರೈತ ಸಂಘ ಹಮ್ಮಿಕೊಂಡಿರುವ ತುಂಗಭದ್ರಾ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ತಮ್ಮ ಬೆಂಬಲ ಸೂಚಿಸಿ, 40 ಸಾವಿರ ರೂ ಗಳ ದೇಣಿಗೆ ನೀಡಿದರು.