ರಾಜ್ಯ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶ

310

ಬಳ್ಳಾರಿ /ಹೊಸಪೇಟೆ: ಸತತ ಬರಗಾಲದಿಂದ ತತ್ತರಿಸಿ ಹೋಗಿರುವ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀನಮೇಷ ಎಣೆಸುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ ಆರೋಪಿಸಿದರು.

ಸ್ಥಳೀಯ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ರಾಜ್ಯ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಮತ್ತು ಸರ್ಕಾರಗಳು ಉದ್ಯಮಗಳ ಹಿತ ಕಾಯುವ ಮೂಲಕ ರೈತರ ಹಿತವನ್ನು ಗಾಳಿ ತೂರಿವೆ. ರಾಜ್ಯದಲ್ಲಿ ರೈತರು ಸಂಕಷ್ಠಗೀಡಾಗಿ ಆತ್ಮಹತ್ಯ ಹಾದಿ ತುಳಿದಿದ್ದರೂ, ಸರ್ಕಾರ ಗಂಭೀರವಾಗಿ ಪರಿಗಣಿಸದೇ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ದೇಶದಲ್ಲಿ ನಷ್ಟ ಸಂಭವಿಸಿದೆ ಎಂದು ಯಾವೊಬ್ಬ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡ ಉದಾರಣೆ ಇಲ್ಲ. ಕೃಷಿ ಸಾಲ ಮನ್ನಾ ಮಾಡುವ ಕುರಿತು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು, ಬೊಟ್ಟು ಮಾಡಿ ತೋರಿಸುವ ಮೂಲಕ ಹೊಣೆಗೇಡಿತನ ಪ್ರದರ್ಶನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಡಿಸಿದರು.

ಅರಣ್ಯ ಭೂಮಿ, ಬಗರ್ ಹುಕಂ ಸಾಗುವಳಿದಾರರಿಗೆ ಪಟ್ಟಾ ನೀಡುವುದು ಸೇರಿದಂತೆ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ರೈತರ ಬೆಳೆ ಹಾನಿ ಪರಿಹಾರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ರಾಜ್ಯದಲ್ಲಿ ವಿವಿಧಡೆ ಪ್ರತಿಭಟನೆ ನಡೆಸಿದರೂ ಸರ್ಕಾರ, ಮನ್ನಣೆ ನೀಡದೇ, ರೈತ ವಿರೋಧಿ ನೀತಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ಸಂಘದ ಜಿಲ್ಲಾಧ್ಯಕ್ಷ ದೇವರಮನಿ ಮಹೇಶ, ಉಪಾಧ್ಯಕ್ಷ ಜೆ.ಎನ್.ಕಾಳಿದಾಸ, ತಾಲ್ಲೂಕು ಅಧ್ಯಕ್ಷ ಎಂ.ಪ್ರಕಾಶ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪರುಶುರಾಮಪ್ಪ ಇತರರು ಮಾತನಾಡಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಬಾಬು ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಹರಸನಾಳ್ ಸಿದ್ಧಪ್ಪ, ಹನುಮಂತಪ್ಪ, ಮಾರುತೆಪ್ಪ, ಗಂಗಾಧರ, ದುರಗಪ್ಪ, ಬಸಪ್ಪ, ಶಫಿ ಬರಕಾತ್, ಎನ್.ವೆಂಕಟೇಶ ಇತರರು ಇದ್ದರು. ಆರಂಭದಲ್ಲಿ ರೈತರು, ನಗರದ ಪ್ರಮುಖ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು.