ಮುಚ್ಚುತ್ತಿದ್ದ ಕಾಲೇಜನ್ನು ಉಳಿಸಿಕೊಂಡ ವಿಷ್ಣು ಸೇನಾ ಸಮಿತಿ.

405

ಬಳ್ಳಾರಿ/:ಹೂವಿನ ಹಡಗಲಿ:   ಇಪ್ಪತ್ತು ವರ್ಷಗಳ ಹಿಂದೆ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಅತಿ ದೊಡ್ಡ ಗ್ರಾಮವಾದ ಹಿರೇಹಡಗಲಿಯ ವಿದ್ಯಾರ್ಥಿಗಳು, SSLC ನಂತರ ಕಾಲೇಜು ಶಿಕ್ಷಣಕ್ಕೆ ಬೇರೆ ಕಡೆ ಹೋಗಲು ಪ್ರಯಾಸ ಪಡುತ್ತಿದ್ದರು. ಇದಕ್ಕಾಗಿ ಅನೇಕ ಹೋರಾಟಗಳು ನಡೆದುದರ ಫಲವಾಗಿ ಕೊನೆಗೂ ವಿಕೆಕೆ ಪದವಿಪೂರ್ವ ಕಾಲೇಜು ಗ್ರಾಮದಲ್ಲಿ ಸ್ಥಾಪನೆಯಾಯಿತು. ಆದರೆ ಊರಿನವರ ಅಂದಿನ ಸಂತಸ ಇಂದಿಲ್ಲ! ಖಾಸಗಿ ಕಾಲೇಜುಗಳ ಪ್ರಭಲ ಪೈಪೋಟಿ ಮತ್ತು ಪಟ್ಟಣದಲ್ಲಿ ಮಾತ್ರ ಉತ್ತಮ ಶಿಕ್ಷಣ ಸಿಗಲು ಸಾಧ್ಯ ಎಂಬ ಹೆತ್ತವರ ಭ್ರಮೆಯಿಂದಾಗಿ ಈ ಕಾಲೇಜು ವಿದ್ಯಾರ್ಥಿಗಳಿಲ್ಲದೆ ಕಾಲೇಜು ಬೇರೆ ಕಡೆ ವರ್ಗವಾಗುವ ಹಂತ ತಲುಪಿದೆ!

ಒಂದು ವೇಳೆ ಕಾಲೇಜು ಬೇರೆಡೆ ವರ್ಗವಾದರೆ, ಬಡ ವಿದ್ಯಾರ್ಥಿಗಳಿಗಾಗುವ ತೊಂದರೆಯನ್ನು ಮನಗಂಡ ಊರಿನ ಪ್ರಮುಖರು, ಡಾ.ವಿಷ್ಣು ಸೇನಾ ಸಮಿತಿ ಮತ್ತು ಇತರೆ ಕನ್ನಡಪರ ಸಂಘಟನೆಗಳು ಒಂದಾಗಿ ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರೆ. ಅದೇನೆಂದರೆ ಕಾಲೇಜು ಇದೇ ಗ್ರಾಮದಲ್ಲಿ ಉಳಿಯಬೇಕಾದರೆ ಅವಶ್ಯವಿರುವಷ್ಟು ವಿದ್ಯಾರ್ಥಿಗಳನ್ನು ಎಲ್ಲರೂ ಸೇರಿ ದಾಖಲಾತಿ ಮಾಡಿಸುವುದೆಂದು. ಅದರಂತೆ ಮನೆ ಮನೆಗಳಿಗೆ ತಲುಪಿದ ಪ್ರಮುಖರೆಲ್ಲರೂ ಹೆತ್ತವರ ಮತ್ತು ವಿದ್ಯಾರ್ಥಿಗಳ ಮನವೊಲಿಸಿ, ಅವರುಗಳ ದಾಖಲಾತಿ ಫೀಸ್ ಅನ್ನು ತಾವೇ ಭರಿಸುವುದಾಗಿ ಹೇಳಿ ೩೦ ವಿದ್ಯಾರ್ಥಿಗಳನ್ನು ಕಾಲೇಜಿಗೆ ನೋಂದಾಯಿಸಿದ್ದಾರೆ. ಆ ಕಾರಣದಿಂದ ಕಾಲೇಜು ಬೇರೆಡೆ ವರ್ಗವಾಗುವ ಭೀತಿಯಿಂದ ಮುಕ್ತವಾಗಿದೆ.

ಇಂತಹ ದಿಟ್ಟ ಕೆಲಸಕ್ಕೆ ಮುಂದಾದ ಡಾ.ವಿಷ್ಣು ಸೇನಾ ಸಮಿತಿ ಹೂವಿನ ಹಡಗಲಿ ಘಟಕದ ಕೊಟ್ರೇಶ್ ಬಾರ್ಕಿ, ಗುಂಡಿ ಚರಣ್ ರಾಜ್, ಮೂಗಪ್ಪ ಉಪನ್ಯಾಸಕರು, ಭರಮಪ್ಪ.ಕೆ, ಕೊಂಪಿ ಬಸವರಾಜ, ಹಾಲೇಶ, ಚೇತನ್, ಬಾಲೇದ ಬಸವರಾಜ, ಮಂಜುನಾಥ, ಪ್ರಶಾಂತ, ಪ್ರಕಾಶ, ಮಲ್ಲಿಕಾರ್ಜುನ ಹೆಚ್, ವಿರೇಶ್ ಎಂ ಊರಿನ ಪ್ರಮುಖರು ಮತ್ತು ಇತರೆ ಕನ್ನಡಪರ ಸಂಘಟನೆಗಳಿಗೆ ಅಭಿನಂದನೆಗಳು.