“ಇದು ಸಾಧ್ಯ” ಸಾಧಿಸಿದ ಛಲಗಾತಿ.. ಆರತಿ

906

ವಿಶೇಷ ವರದಿ: ದೇವರ ಮಕ್ಕಳು ಮತ್ತು ಛಲಗಾತಿ ಆರತಿ

ಬಳ್ಳಾರಿ / ಹೊಸಪೇಟೆ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ರೆ ತಿರಸ್ಕಾರ ಮಾಡೋ ಜನ ಇನ್ನೂ ನಮ್ಮ ನಡುವೆ ಇದ್ದಾರೆ. ಅವರನ್ನ ಆಶ್ರಮಕ್ಕೋ ಅಥವಾ ವಿಶೇಷ ಶಾಲೆಗೆ ಸೇರಿಸೋ ಜನರಿದ್ದಾರೆ. ಅಂತಹ ನಡೆದಾಡುವ ದೇವರಂತಿರುವ ಮುಗ್ಧಜೀವಿಗಳ ನಡುವೆ ಅವರ ಸ್ವಂತ ಮಕ್ಕಳಂತೆ ಕಾಣುತ್ತಾ ಸಾಮಾನ್ಯರನ್ನಾಗಿ ಕಾಣುವ ದೇವತೆಯಂತೆ ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲೊಬ್ಬ ದಿಟ್ಟ ಮಹಿಳೆ.

ಹೌದು! ಬುದ್ಧಿಮಾಂದ್ಯ ಮಕ್ಕಳ ಆರೈಕೆಗಾಗಿ ನಗರದ ಹೊಸ ಅಮರಾವತಿ ಬಡಾವಣೆಯಲ್ಲಿ ವಸತಿಯುತ ವಿಶೇಷ ಶಾಲೆಯನ್ನು ಆರಂಭಿಸಿ, ಹಗಲಿರುಳು ಶ್ರಮಿಸುತ್ತಿರುವ ಛಲಗಾತಿ ಆರತಿ. ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ ಮೆಂಟ್’ಎಂಬ ಸಂಸ್ಥೆ ಮೂಲಕ ಸಾಧ್ಯ ವಸತಿಯುತ ವಿಶೇಷ ಶಾಲೆ ಮತ್ತು ವೃತ್ತಿ ತರಬೇತಿ ಕೇಂದ್ರ ಆರಂಭಿಸಿರುವ ಆರತಿ, ವಿಶೇಷ ಮಕ್ಕಳನ್ನು ಹೆತ್ತ ತಾಯಿಯಂತೆ ಸಾಕಿ ಸಲಹುತ್ತಿದ್ದಾರೆ.

ಸುಸಂಸ್ಕೃತ ಕುಟುಂಬದಿಂದ ಬಂದ ಆರತಿ ಕೆ. ಮೂಲತಃ ಮಡಿಕೇರಿ, ಈಗ ನೆಲೆಸಿದ್ದು ಮಾತ್ರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲಿ ್ಲ ತಮ್ಮಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ ಬುದ್ಧಿಮಾಂದ್ಯ ಮಕ್ಕಳ ಲಾಲಾನೆ-ಪಾಲನೆಯಲ್ಲಿ ತೊಡಗಿರುವ ಇವರು, ಓದಿದ್ದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ ಡಬ್ಲು. (ಸಮಾಜ ಸೇವೆಕಾರ್ಯ) .ಪತಿ ಕೂಡ ಒಳ್ಳೆಯ ಸಂಬಳ ಬರುವ ಕೆಲಸದಲ್ಲೇ ಇದ್ದಾರೆ. ಇಬ್ಬರು ಮಕ್ಕಳು ಇದ್ದಾರೆ. ತಾವಾಯಿತು ತಮ್ಮ ಸಂಸಾರ ಆಯಿತು ಅಂತ ಇದ್ದರೆ ಯಾರೂ ಇವರನ್ನು ಗಮನಿಸುತ್ತಿರಲಿಲ್ಲ. ಆದರೆ, ದೇವರ ಮಕ್ಕಳ ಸೇವೆಗಾಗಿ ಮುಂದಾದ ಇವರನ್ನು ಎಲ್ಲರೂ ಅಭಿನಂದಿಸಲೇಬೇಕು.

ದೇವರ ಮಕ್ಕಳ ಸೇವೆ: ಆದರೆ ಸಾಧಕಿ ಆರತಿಯವರಿಗೆ ಜೀವನದಲ್ಲಿ ಸಾಧನೆ ಮಾಡಬೇಕು.ತಮ್ಮಿಂದ ಸಮಾಜಸೇವೆ ಮಾಡಬೇಕೆಂಬ ಹೆಬ್ಬಯಕೆಯಿಂದ ಆಲೋಚನೆ ಮಾಡಿದಾಗ ಮೂಡಿದ್ದೇ ದೇವರ ಮಕ್ಕಳ ಸೇವೆ. ಆಗ ತಮ್ಮ ಪತಿಗೆ ಇವರ ಹೆಬ್ಬಯಕೆಯನ್ನು ಹೇಳಿದಾಗ ಅವರೂ ಸಹ ಆರತಿಯವರಿಗೆ ಬೆಂಗಾವಲಾಗಿ ಒಪ್ಪಿಗೆ ಸೂಚಿಸಿದರು. ಆಗ  ಹುಟ್ಟಿದ್ದೇ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ ಮೆಂಟ್’ಎಂಬ ಸಂಸ್ಥೆ. ಈಗ ಈ ದೇವರ ಮಕ್ಕಳ ಸೇವೆಯ ಸಂಸ್ಥೆಗೆ 2 ವರ್ಷ ಆಗಿದೆ.

ತಾಯಿ ವಾತ್ಸಲ್ಯ:ಈ ಕೂಟದಲ್ಲಿ ಸುಮಾರು 40 ರಿಂದ 45 ಬುದ್ಧಿಮಾಂದ್ಯತೆಯ ಮಕ್ಕಳು ಇದ್ದಾರೆ. ಇವರಿಗೆ ಇಲ್ಲಿ ವಿಶೇಷ ಆರೈಕೆಯ ಜೊತೆಗೆ ಆಪ್ತ ಸಮಾಲೋಚನೆ, ವೈದ್ಯಕೀಯ, ಕಂಪ್ಯೂರ್ಟ,ಪಿಸಿಯೋತರಪಿ ಹೀಗೆ ಎಲ್ಲವೂ ಸಿಗುತ್ತೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆರತಿಯವರಿಂದ  ತಾಯಿ ಪ್ರೀತಿ ಈ ಎಲ್ಲಾ ಮಕ್ಕಳಿಗೂ ಸಿಗುತ್ತಿದೆ.ಇದರಿಂದಲೇ ಎಲ್ಲ ಮಕ್ಕಳು ದೇವರ ಮಕ್ಕಳಂತೆ ಲವಲವಿಕೆಯಿಂದ ಇದ್ದಾರೆ.

ಶಿಕ್ಷಣ ಪ್ರೀತಿ: ಇತ್ತೀಚೆಗೆ ಇವರ ಸಾಧ್ಯ ಸಂಸ್ಥೆಯಲ್ಲೇ ಇದ್ದ ಮಗಳು 10ನೇ ತರಗತಿಯ ಪರೀಕ್ಷೆ ಬರೆದು ಶೇ.45 ರಷ್ಟು ಅಂಕಪಡೆದದ್ದು ಖುಷಿಯ ಸಂಗತಿಯಾಗಿದೆ. ಈ ಆರತಿ ಅವರಿಗೂ ಕೂಡ ದೇವರ ಮಕ್ಕಳು ಎಂದರೆ ಎಲ್ಲಿಲ್ಲದ ಅಕ್ಕರೆ, ಮಮತೆ.

ಪ್ರಶಸ್ತಿ ಗೌರವ: ದೇವರ ಮಕ್ಕಳಲ್ಲಿ ದೇವತೆಯಾದ ಆರತಿ ಅವರನ್ನು 2015ರಲ್ಲಿ ಅಮೇರಿಕದ ವಿಶ್ವ  ಬುದ್ಧಿಮಾಂದ್ಯ ಮಕ್ಕಳ  ಓಲಂಪಿಕ್ ಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಮಕ್ಕಳ ಕೋಚ್ ಆಗಿ ನೇಮಿಸಿತ್ತು. ಇವರು ವಿಶೇಷ ಆಸಕ್ತಿವಹಿಸಿ ತಮಗೆ ವಹಿಸಿದ ಜವಾಬ್ದಾರಿ ನಿಭಾಯಿಸಿದರು. ಭಾರತಕ್ಕೆ  ಸುಮಾರು  47  ಪದಕ ಬರುವಂತೆ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಇನ್ನೂ ರಾಜ್ಯ ಸರಕಾರ ಇವರಿಗಿರುವ ವಿಶೇಷ ಆಸಕ್ತಿ ಮತ್ತು ಬುದ್ಧಿಮಾಂದ್ಯ ಮಕ್ಕಳ ಬೆಳವಣಿಗೆಗೆ ಶ್ರಮಿಸುತ್ತಿರುವ ಇವರನ್ನು ಗುರುತಿಸಿ 2016 ರಲ್ಲಿ  ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಒಟ್ಟಿನಲ್ಲಿ ಆರತಿಯವರು ತಮ್ಮ ನಿಸ್ವಾರ್ಥ ಸೇವೆಯಿಂದ ಬುದ್ಧಿಮಾಂದ್ಯ ಮಕ್ಕಳೆನ್ನದೇ ಅವರನ್ನು ದೇವರ ಮಕ್ಕಳಂತೆ ಪ್ರೀತಿ,ಅಕ್ಕರೆ, ಮಮತೆ, ವಾತ್ಸಲ್ಯದಿಂದ ಕಾಣುತ್ತಿದ್ದಾರೆ. ಆದ್ದರಿಂದ ಅವರ ಸೇವೆಗೆ ಪ್ರಶಸ್ತಿ ಗೌರವಾದರಗಳು ತಾನಾಗೆ ಒಲಿಯುತ್ತಿವೆ. ಅದರಂತೆ ಅವರ ದೇವರ ಮಕ್ಕಳ ಸೇವೆ ಮತ್ತಷ್ಟು ಶಕ್ತಿ ಮೂಡುವಂತೆ ಮಾಡಿವೆ.