ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.

479

ಬಳ್ಳಾರಿ /ಹೊಸಪೇಟೆ:ವಿಕಲಚೇತನರ ಶೇ.3 ರ ಅನುದಾನವನ್ನು ಸಮರ್ಪಕ ಅನುಷ್ಠಾನ ಮಾಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ವಿಕಲೇತನರ ಸಂಘದ ನೇತೃತ್ವದಲ್ಲಿ ನೂರಾರು ಅಂಗವಿಕಲರು, ನಗರಸಭೆ ಮತ್ತು ತಾಲೂಕ ಆಡಳಿತ ಕಛೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ನಗರಸಭೆ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಶೇ.3 ರ ಅನುದಾನದಲ್ಲಿ ವಿಕಲಚೇತನರ ತಪಾಸಣೆ ಶಿಬಿರ ಕೈಗೊಂಡಿದ್ದು, 2 ವರ್ಷ ಕಳೆದರೂ ಕೃತಕ ಸಾಧನ, ಸಲಕರಣೆಗಳು ವಿತರಣೆಯಾಗಿಲ್ಲ. ಇದಕ್ಕಾಗಿ ಮೀಸಲಿಟ್ಟ ಅಂದಾಜು 9ಲಕ್ಷ ರೂ. ಬಳಕೆಯಾಗುತ್ತಿಲ್ಲ. ಕಳೆದ 3 ವರ್ಷಗಳಿಂದ ಅಂಗವಿಕಲರ ಕುಂದು ಕೊರತೆ ಸಭೆ ಕರೆಯದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗಿದರು.

ನಗರಾಭಿವೃದ್ದಿ ಪ್ರಾಧಿಕಾರದಿಂದ ಮಂಜೂರಾದ ಸೈಟ್‌ನಲ್ಲಿ ವಿಕಲಚೇತನರ ಪಾರ್ಕ್ ನಿರ್ಮಿಸಲು ಅನುದಾನ ಮೀಸಲಿಟ್ಟು ವರ್ಷಗಳೇ ಕಳೆದರೂ ಪ್ರಗತಿ ಕಂಡಿಲ್ಲ. ಆಶ್ರಯ ಸೈಟ್ ಗಳಿಗೆ ಅರ್ಜಿ ಸಲ್ಲಿಸಿ 6-7 ವರ್ಷಗಳಾದರೂ ಈ ಬಗ್ಗೆ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ, ಮೋಟಾರ್ ಚಾಲಿತ ವಾಹನಗಳಿಗೆ ಲಕ್ಷ ಲಕ್ಷ ಅನುದಾನವಿದ್ದರೂ ಮೋಟರ್ ವಿತರಣೆಗೆ ನಗರಸಭೆ ಮನಸ್ಸು ಮಾಡುತ್ತಿಲ್ಲ, ಅಂಗವಿಕಲರ ಭವನ ನಿರ್ಮಾಣವಾಗಿ 2 ವರ್ಷ ಕಳೆದರೂ ಲೋಕಾರ್ಪಣೆ ಭಾಗ್ಯ ಇನ್ನೂ ಕೂಡಿ ಬಂದಿಲ್ಲ ಹೀಗಾಗಿ ಕಿಡಿಗೇಡಿಗಳು ಭವನದ ಬೀಗ ಮುರಿದು ಅನೈತಿಕ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಶೇ.3 ರ ಅನುದಾನವನ್ನು ನುಂಗಿ ಹಾಕುವ ಹುನ್ನಾರ ನಡೆದಿದೆಯೊ ಎಂಬ ಗುಮಾನಿ ಮೂಡಿದೆ. ಕೂಡಲೇ ಕರ್ತವ್ಯ ಲೋಪ ಎಸಗಿರುವ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುಬೇಕು ಹಾಗೂ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಜರಗುವ ಅಂಗವಿಕಲರ ಕುಂದು ಕೊರತೆ ಸಭೆ 3 ವರ್ಷ ಕಳೆದರೂ ನಡೆದಿಲ್ಲ ಈ ಬಗ್ಗೆಯೂ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 

ಮುಖಂಡರಾದ ಎನ್.ವೆಂಕಟೇಶ, ಜಿ.ಅಂಜಿನಿ, ಜಿ.ಮುಕ್ಕಣ್ಣ ಕೆ.ಹುಲಗಪ್ಪ ಕೆ.ಜಿ.ವೆಂಕಟೇಶ್ ಎನ್.ವೆಂಕಟೇಶ್ ಕೆ.ಜಿ.ನಾಗೇಂದ್ರ ಕೆ.ರಾಜಸಾಭ್, ಮಹಮ್ಮದ್ ರಫೀಕ್ ಮೆಹಬೂಬ್ ಭಾಷಾ, ಮಭಾಷಾ, ಹುಲುಗಪ್ಪ, ವಿ.ವೆಂಕಟೇಶ್, ಶಾಂತಕುಮಾರ,  ನಾಗರಾಜ್, ರಾಮಂಜಿನಿ, ಯಲ್ಲಪ್ಪ ಅರುಣು ಕುಮಾರ, ಪರಶುರಾಮ್, ಪಾಂಡುನಾಯಕ್, ವೀರುಪಾಕ್ಷಿ, ರಮೇಶ್, ಶರಬಯ್ಯ, ತಿಮ್ಮಪ್ಪ ಭಾಷ, ಯಲ್ಲಾಲಿಂಗ, ಬಾಬು, ನಿಂಗಪ್ಪ, ನಾಣಿಕೇರಿ ಸದಾಶಿವ, ಎಮ್ ಪ್ರಕಾಶ್, ಮೇರಿ ಶಿವಗಂಗಮ್ಮ, ಶೀಲಾ, ನೂರ್ ಜಾಹನ್, ನಾಗಮ್ಮ, ರೇಣುಕಾ, ಮಂಜುಳಾ, ಚಾಂದ್ ಬೀ, ರಸೋಲ್ ಬೀ,  ಖಾಜ ಬನ್ನಿ, ರಮೀಜಾ, ಉಮಾಮಹೇಶ್ವರಿ, ದುರ್ಗಮ್ಮ,ಶಾಂತ ಹಾಗೂ ಗಂಗಮ್ಮಇತರರಿದ್ದರು.