ಗ್ರಾಮಸ್ಥರಿಗೆ ವಿದ್ಯುತ್ ಭಾಗ್ಯ..!

298

ಚಾಮರಾಜನಗರ/ಹನೂರು: ಹಲವಾರು ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಿಂದಿದ್ದ ಹನೂರು ತಾಲ್ಲೂಕಿನ ಅರ್ಧನಾರಿಪುರ ಗ್ರಾಮಕ್ಕೆಇದೀಗ ವಿದ್ಯುತ್ ಭಾಗ್ಯ ಒದಗಿ ಬಂದಿದೆ.
ಮುಂದಿನ ವಿಧಾನಸಭಾ ಚುನಾವಣೆಯ ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಲೋಕೇಶ್ ಮೌರ್ಯ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಭಾಗ್ಯ ಕರುಣಿಸಿ ಗ್ರಾಮಕ್ಕೆ ಬೆಳಕು ತರುವ ಕಾರ್ಯ ಮಾಡಿದ್ದಾರೆ.
ಈ ಕುರಿತು ಲೋಕೇಶ್ ಪ್ರತಿಕ್ರಯಿಸಿ ಬಹಳ ವರ್ಷಗಳಿಂದ ಈ ಗ್ರಾಮಸ್ಥರು ವಿದ್ಯುತ್ ಸೌಕರ್ಯವಿಲ್ಲದೆ ಕತ್ತಲೆಯಲ್ಲಿ ಜೀವನ ದೂಡುತ್ತಿದ್ದರು. ಇದರ ಬಗ್ಗೆ ನನಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಆಲೋಚನೆ ಮಾಡಿದ್ದು ಇಂದು ಈ ಕೆಲಸ ಪೂರ್ಣಗೊಂಡಿದೆ. ಇದಲ್ಲದೆ ನಲ್ಲಿಕತ್ರಿ ಗ್ರಾಮದ ಅರವತ್ತು ಮನೆಗಳಿಗೆ ಸೋಲಾರ್ ದೀಪ ಅಳವಡಿಸಿ ಕೊಡುವ ಕಾರ್ಯವನ್ನೂ ಸಹ ಇದೇ ಸಂದರ್ಭದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಮಾರ್ಟಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಈಗ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕೊಡಿಸಿ ಬೆಳಕು ತರುವ ಕಾರ್ಯ ಮಾಡಿದ್ದೇನೆ ಎಂದರು. ತಾವು ಬಡವರ ಪರವಾಗಿದ್ದು ಬಡವರ ಯಾವುದೇ ಸಮಸ್ಯೆಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಸಿದ್ದರಾಜು, ಕೃಷ್ಣಮೂರ್ತಿ, ಸಂದೇಗು, ಅಂತೋಣಿ, ಗೋವಿಂದ ಮತ್ತಿತರರಿದ್ದರು.