ವಿದ್ಯುತ್ ಪೂರೈಕೆ ಸಮಯ ಬದಲಾಯಿಸಿ ಜೀವ ಉಳಿಸಿ.

305

ಬಳ್ಳಾರಿ /ಹೊಸಪೇಟೆ: ಚಿರತೆ, ಕರಡಿ ಹಾವಳಿ ತಪ್ಪಿಸಿಕೊಳ್ಳಲು ರೈತರ ಪಂಪ್‌ಸೆಟ್‌ಗೆ ಸೋರ್ಯೋದಯಕ್ಕೂ ಮುನ್ನ 4 ಗಂಟೆಗೆ ವಿದ್ಯುತ್ ನೀಡುವ ಬದಲು ಬೆಳಿಗ್ಗೆ 6 ರಿಂದ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಲ್ಲಾಪುರ ಹಾಗೂ ವೆಂಕಟಾಪುರ ಗ್ರಾಮ ಘಟಕಗಳ ರೈತರು ಗುರುವಾರ ಜೆಸ್ಕಾಂ ಕಛೇರಿಗೆ ತೆರಳಿ ಆಗ್ರಹಿಸಿದರು.

ನಗರದ ಡ್ಯಾಂರಸ್ತೆಯ ವಿದ್ಯುತ್‌ಚ್ಛಕ್ತಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು(ಇಇ)ಯನ್ನು ಭೇಟಿ ಮಾಡಿದ ರೈತರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರೈತ ಸಂಘ ಜಿಲ್ಲಾಧ್ಯಕ್ಷ ಜೆ. ಕಾರ್ತಿಕ ವಿವರಿಸುತ್ತಾ, ಬೆಳಿಗ್ಗೆ 4ಕ್ಕೆ ವಿದ್ಯುತ್ ನೀಡುವುದರಿಂದ ಆ ಸಮಯದಲ್ಲಿ ಚಿರತೆ, ಕರಡಿ, ಕಾಡು ಹಂದಿಗಳ ಓಡಾಟ ಹೆಚ್ಚಾಗಿದ್ದು, ಜೀವ ಕೈಯಲ್ಲಿಡಿದುಕೊಂಡು ಹೋಗಬೇಕಿದೆ. ದಿಢೀರನೆ ಅನಾಹುತ ಕಾಡು ಪ್ರಾಣಿಗಳಿಂದ ದಾಳಿ ಎದುರಾದರೆ ಪ್ರಾಣತೆತ್ತಬೇಕಾದ ಪರಿಸ್ಥಿತಿ ಇದೆ. ಸರಕಾರ ನಿಗದಿಪಡಿಸಿದ ಸಮಯವು ರೈತರ ಜೀವ ತೆಗೆಯುವಂತಿದೆ. ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಸಮಯವನ್ನು ಬದಲಾಯಿಸಿ ಸಮರ್ಪಕ ವಿದ್ಯುತ್ ನೀಡಬೇಕು. ಟ್ರಾನ್ಸ್‌ಫಾರಂರ್‌ಗಳು ಸುಟ್ಟರೆ 48 ತಾಸಿನೊಳಗೆ ಬೇರೆ ಟ್ರಾನ್ಸ್‌ಫಾರಂನ್ನು ಕೂಡಿಸಿಕೊಡುವುದಕ್ಕೆ ಸರ್ಕಾರದ ಆದೇಶ ಪಾಲನೆಯಾಗಬೇಕು ಎಂದು ಆಗ್ರಹಿಸಿದರು. ಕಮಲಾಪುರ ಜೂನಿಯರ್ ಇಂಜಿನಿಯರ್ ಸುನೀಲ್ ಕುಮಾರ್ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಟ್ರಾನ್ಸ್‌ಫಾರಂ ಸುಟ್ಟರೆ ಸರಿಯಾದ ಸಮಯಕ್ಕೆ ಹಾಕುವುದಿಲ್ಲ ಮತ್ತು ರೈತರಿಗೆ ದುಡ್ಡಿನ ಬೇಡಿಕೆಯನ್ನು ಇಟ್ಟು, ಟಿ.ಸಿ.ಯನ್ನು ರೈತರಿಗೆ ತಮ್ಮ ಖರ್ಚಿನಲ್ಲಿಯೇ ಮಾಡಿಕೊಂಡು ಬನ್ನಿ ಎಂದು ಹೇಳುತ್ತಾರೆ. ನಲ್ಲಾಪುರದ ಹಾಗೂ ವೆಂಕಟಾಪುರದ ರೈತರು ಕಾರ್ಯಪಾಲಕರ ಅಭಿಯಂತರರ ಗಮನಕ್ಕೆ ತಂದಿದ್ದು ಕಮಲಾಪುರದ ಜೆ.ಇ.ಯವರನ್ನು ಬೇರೆಡಗೆ ವರ್ಗಾವಣೆ ಮಾಡಿ,  ಬೇರೊಬ್ಬ ಜೆ.ಇ ಯನ್ನು ನೇಮಿಸಬೇಕೆಂದು ಆಗ್ರಹಿಸಿದರು.ರೈತರ ಹಕ್ಕೊತ್ತಾಯಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೊಸಪೇಟೆ ವಿದ್ಯುತ್‌ಚ್ಛಕ್ತಿ ಮಂಡಳಿಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು. ಜೆಸ್ಕಾಂ ಇಇ ರೈತರ ಬೇಡಿಕೆಗಳಿಗೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಟಿ.ವೆಂಕಟೇಶ್ ನಗರಘಟಕದ ಅಧ್ಯಕ್ಷರು, ಹನುಮಂತಪ್ಪ ನಲ್ಲಾಪುರ ಗ್ರಾಮ ಘಟಕದ ಅಧ್ಯಕ್ಷರು, ದುರ್ಗಪ್ಪ ವೆಂಕಟಾಪುರ ಗ್ರಾಮ ಘಟಕದ ಅಧ್ಯಕ್ಷರು, ರಮೇಶ್ ಉಪಾಧ್ಯಕ್ಷರು, ನಾಗರಾಜ್, ಮಧುಸೂಧನ್ ಕೊಟಾಲ್, ಮಂಜು, ಗಾದಿಲಿಂಗ, ಹೊನ್ನೂರಪ್ಪ, ಕೆಂಚಪ್ಪ, ಹಾಗೂ ನಲ್ಲಾಪುರ ಮತ್ತು ವೆಂಕಟಾಪುರ ಗ್ರಾಮದ ಇನ್ನು ಮುಂತಾದ ರೈತ ಮುಖಂಡರು ಭಾಗವಹಿಸಿದ್ದರು.