ಸ್ಥಳೀಯ ಬರಹಗಾರರಿಗೆ ಆದ್ಯತೆ ನೀಡುವಂತೆ ಆಗ್ರಹ

237

ಬಳ್ಳಾರಿ /ಹೊಸಪೇಟೆ: ವಿಶ್ವವಿದ್ಯಾಲಯ ಮತ್ತುಮಹಾವಿದ್ಯಾಲಯಗಳಲ್ಲಿರುವ ಬರಹಗಾರರಂತೆ ಸ್ಥಳೀಯ ಮಟ್ಟದಲ್ಲೂ ಇಂಥ ಬರಹಗಾರರು ಸಿಗುತ್ತಾರೆ. ಆದರೆ ಸರ್ಕಾರ ಅಂಥವರನ್ನು ಗುರುತಿಸುವ ಕೆಲಸಮಾಡಬೇಕು  ಎಂದು ವಕೀಲ ಹಾಗು ಬರಹಗಾರ ಎ.ಕರುಣಾನಿಧಿ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ತಾಲೂಕು ಕವಿ ಮತ್ತು ಬರಹಗಾರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಶಿರಸ್ಥೇದಾರ ಮಂಜುನಾಥವರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಕರುಣಾನಿಧಿ, ಈ ನೆಲದೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಸಾವಿರಾರು ಯುವಕರು, ಮಹಿಳೆಯರು, ನಾಗರೀಕರು ಸಹ ಸಾಹಿತ್ಯಿಕ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಆದರೆ ಸರ್ಕಾರ ಅವರನ್ನು ಗುರುತಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡ ವಿಶ್ವವಿದ್ಯಾಲಯಗಳು ಸ್ಥಳೀಯ ಕವಿ, ಬರಹಗಾರರನ್ನು ಗುರುತಿಸುವ ಮತ್ತು ಅವರಿಗೆ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಜಂಟಿಯಾಗಿ ತಾಲೂಕಿನಲ್ಲಿ ಮೂರು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದರು.

ಬರಹಗಾರ ಜಂಬುನಾಥ ಹೆಚ್.ಎಂ. ಮಾತನಾಡಿ, ಕೇವಲ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಲ್ಲಿ ವೃತ್ತಿ ಮಾಡಿದವರು ಬರೆದದ್ದಷ್ಟೇ ಸಾಹಿತ್ಯವಲ್ಲ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ವಿಚಾರಗಳು ಹರಿದಾಡಬೇಕಾದರೆ ಅದಕ್ಕೊಂದು ಸ್ಪಷ್ಟ ಮಾರ್ಗದರ್ಶನ, ನಿರಂತರ ಪ್ರೋತ್ಸಾಹ ಮತ್ತು ಸಂರಕ್ಷಣೆ ಅಗತ್ಯವಿದೆ. ಕವಿಗಳಿಗೆ, ಸಾಹಿತಿಗಳಿಗೆ, ಬರಹಗಾರರಿಗೆ ಸಂರಕ್ಷಣೆ, ಪ್ರೋತ್ಸಾಹ ನೀಡುವುದೆಂದರೆ ಉತ್ಕೃಷ್ಠ ಮೌಲ್ಯಗಳನ್ನು ಪೋಷಿಸುವುದು ಎಂದರ್ಥ. ಇಲ್ಲವಾದಲ್ಲಿ ಸಾಹಿತ್ಯವು ತಕ್ಷಣದ ಪ್ರತಿಕ್ರಿಯೆಯಾಗುವ ಮೂಲಕ ತನ್ನ ಸತ್ವವನ್ನು ಕಳೆದುಕೊಳ್ಳುವ ಅಪಾಯವಿದೆ ಎಂದರು.

ಹಿರಿಯ ಕವಿಗಳು ಮತ್ತು ಬರಹಗಾರರೂ ಆದ ಸೊ.ದ.ವಿರುಪಾಕ್ಷಗೌಡ ಮಾತನಾಡಿದರು.

ಪ್ರತಿಭಟನೆಯಲ್ಲಿ ಕವಿಯತ್ರಿ ನೂರ್‌ಜಹಾನ್, ಬಿ.ಕೆ.ಶೀಲಾ, ಕವಿಗಳಾದ ಕೆ.ಪ್ರಹ್ಲಾದರಾವ್, ಟಿ.ಯಮುನಪ್ಪ, ಚಂದ್ರಶೇಖರ ರೋಣದಮಠ, ಗೋವಿಂದು, ಟಿ.ಹೆಚ್.ಎಂ. ಚಂದ್ರಶೇಖರ, ಅಯ್ಯಪ್ಪ, ಮುದೇನೂರು ಉಮಾಮಹೇಶ್ವರ, ಟಿ.ಎಂ.ನಾಗಭೂಷಣ, ಮಾರೆಣ್ಣ, ಮಧುರಚನ್ನ ಶಾಸ್ತ್ರಿ ಉಪಸ್ಥಿತರಿದ್ದರು