ಮಳೆಯ ಜೊತೆ ಹಂಪಿಯ ಸೊಬಗ ನೋಡು ಬಾರಾ

449

ಬಳ್ಳಾರಿ /ಹೊಸಪೇಟೆ – ವಿಶ್ವಪ್ರಸಿದ್ಧ ಹಂಪಿಯಲ್ಲಿ ಮುಂಗಾರು ಮಳೆಯ ಸಿಂಚನಕ್ಕೆ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಅಯ್ಯೋ ಮಳೆ ಬಂತಲ್ಲಪ್ಪಾ ಎಂದು ಗೊಣಗದೇ ಕಣ್ಣೆದುರಿಗಿರುವ ವಿಶ್ವಪರಂಪರಾ ಪಟ್ಟಿಯ ಸ್ಮಾರಕವನ್ನು ಮಳೆರಾಯನ ಜೊತೆ ಕಣ್ತುಂಬಿಕೊಳ್ಳುತ್ತಿದ್ದಾರೆ. ನಿನ್ನೆ ಸಂಜೆ ಸುರಿದ ಮಳೆಗೆ ಹಂಪಿಯ ವಿಜಯವಿಠ್ಠಲ ದೇವಸ್ಥಾನದಲ್ಲಿ ನೋಡಲು ಆಗಮಿಸಿದ್ದ ಪ್ರವಾಸಿಗರಿಗೆ ಖುಷಿಯೋ ಖುಷಿ. ಬೆಂಗಳೂರು ಸೇರಿದಂತೆ ದೇಶದ ಹಲವು ಮೂಲೆಗಳಿಂದ ಆಗಮಿಸಿದ್ದ ಯುವಕ-ಯುವತಿಯರ ಗುಂಪು ಮಳೆಯಲ್ಲಿಯೇ ಸ್ಮಾರಕ ವೀಕ್ಷಣೆ ಮಾಡಿದರು. ಜಿನಿ ಜಿನಿ ಮಳೆಯಲ್ಲಿ ನೆನೆಯುತ್ತ ವಿಶ್ವಸುಂದರ ಸ್ಮಾರಕವನ್ನು ನೋಡುತ್ತ ಮನಸೋತರು. ಒಂದು ಕಡೆ ಕಲ್ಲಿನ ರಥದ ಸೊಬಗಾದ್ರೆ ಮತ್ತೊಂದುಕಡೆ ಮುಂಗಾರು ಮಳೆಯ ಸಿಂಚನಕ್ಕೆ ಯುವತಿಯರು ಕುಣಿ ಕುಣಿದು ನೋಡಿದ್ದು ವಿಶೇಷವಾಗಿತ್ತು. ನಿನ್ನೆ ಸಂಜೆ ಒಂದುವರೆ ಗಂಟೆ ಮಳೆಗೆ ಹಂಪಿಯ ವಾತಾವರಣ ಮಲೆನಾಡಿನಂತೆ ಕಂಗೊಳಿಸುತ್ತಿತ್ತು. ಮಳೆಯಲ್ಲಿಯೂ ಪ್ರವಾಸಿಗರು ಸಮಯ ವ್ಯರ್ಥ ಮಾಡದೇ ಸ್ಮಾರಕಗಳ ವೀಕ್ಷಣೆ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಕಳೆದ ಎರಡು ಬಾರಿ ಬಿಸಿಲಿನಲ್ಲಿ ಹಂಪಿಯನ್ನು ನೋಡಿದ್ದೇವೆ. ಆದರೆ ಮಳೆಯಲ್ಲಿ ಹಂಪಿಯನ್ನು ನೋಡುತ್ತಿರೋದು ಇದೇ ಮೊದಲು ಎಂದು ಗೀತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಮಳೆಗಾಲದಲ್ಲಿ ಹಂಪಿ ಸ್ಮಾರಕಗಳನ್ನು ಮಳೆಯಲ್ಲಿ ನೆನೆಯುವಾಗ ನೋಡುವುದು ಅದ್ಭುತ ಅನುಭವ, ಹಂಪಿ ಮಳೆಗಾಲದಲ್ಲಿ ಇನ್ನಷ್ಟು ಚೆಂದ ಕಾಣುತ್ತೆ ಎಂದು ಸ್ನೇಹಿತೆಯರಾದ ಶಾಂಭವಿ, ಶರಾವತಿ ತಮ್ಮ ಅನುಭವ ಹಂಚಿಕೊಂಡರು​