ರಂಜಾನ್ ಶಾಂತಿಸಭೆ

370

ತುಮಕೂರು/ಹುಳಿಯಾರು:ರಂಜಾನ್ ಹಬ್ಬದ ನಿಮಿತ್ತ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಸಿಪಿಐ ಮಾರಪ್ಪ ಹಾಗೂ ಪಿಎಸೈ ಪ್ರವೀಣ್ ಕುಮಾರ್ ಶುಕ್ರವಾರದಂದು ವಿವಿಧ ಸಂಘ ಸಂಸ್ಥೆಗಳ,ಮುಖಂಡರುಗಳ ಸಾರ್ವಜನಿಕರ ಶಾಂತಿ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಮಾರಪ್ಪ ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಆಚರಣೆ ವೇಳೆ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಜಾತಿಯ ಜನರು ಸಹಕಾರ ನೀಡುವಂತೆ ಮನವಿ ಮಾಡಿದರು. ಹಿಂದೂ ಹಾಗೂ ಮುಸಲ್ಮಾನರು ಸಹೋದರರಂತೆ ನಡೆದುಕೊಳ್ಳಬೇಕು ಹಾಗೂ ಶಾಂತಿಕದಡುವಂತಹ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ ಸಮಾಜದ ಹಿರಿಯರು ಮುಂದಾಳತ್ವವಹಿಸಿ ಸಮಸ್ಯೆ ಬಗೆ ಹರಿಸಬೇಕೆ ಹೊರತು ಅದನ್ನು ಪ್ರಚೋದಿಸಿ ಸಮಸ್ಯೆ ಬಿಗಡಾಯಿಸಲು ಮುಂದಾಗಬಾರದು ಎಂದು ತಿಳಿಹೇಳಿದರು

ಪಿಎಸೈ ಪ್ರವೀಣ್ ಕುಮಾರ್ ಮಾತನಾಡಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆ ಹೊಣೆ ನಮ್ಮ ಮೇಲಿದೆ. ಈ ಹಿಂದಿನಿಂದ ನಡೆದು ಬಂದಂತೆ ಸೌಹಾರ್ದಯುತವಾಗಿ ರಂಜಾನ್ ಆಚರಿಸುವಂತೆ ಹೇಳಿದರು.ಮೆರವಣಿಗೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಠಾಣೆಯ ಗಮನಕ್ಕೆ ತರಬೇಕು, ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರಿದರು.

ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಮಾತನಾಡಿ ಪಟ್ಟಣದ ಇತಿಹಾಸದಲ್ಲಿ ಕೋಮು ಗಲಭೆಗಳಾಗಿಲ್ಲ, ಎಲ್ಲರೂ ಒಂದಾಗಿ ನಮ್ಮ ನಮ್ಮ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ, ಅಣ್ಣತಮ್ಮಂದಿರಂತೆ ಸೌಹಾರ್ದತೆಯಿಂದ ಬದು ಕುತ್ತಿದ್ದೇವೆ , ಮುಂದೆ ಕೂಡಾ ಶಾಂತಿಯಿಂದ ಬಾಳೋಣ ಎಂದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಪ್ರದೀಪ್,ನೂರಾನಿ ಮಸೀದಿ ಮುತುವಲ್ಲಿ ದಸ್ತಗೀರ್ ಸಾಬ್ ,ಮಿಲಾದ್ ಮಸೀದಿಯ ಇಸ್ಮಾಯಲ್ ಸಾಬ್,ಗ್ರಾಮಪಂಚಾಯ್ತಿ ಉಪಾಧ್ಯಕ್ಷ ಗಣೇಶ್,ಮಾಜಿ ಉಪಾಧ್ಯಕ್ಷ ಜಬೀಉಲ್ಲಾ ,ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯಮಹ್ಮದ್ ಸಜ್ಜಾದ್,ಅಮಾನುಲ್ಲಾಖಾನ್,ಗ್ರಾಪಂ ಸದಸ್ಯ ಡಿಶ್ ಬಾಬು,ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಬಡಗಿ ರಾಮಣ್ಣ, ಆಂಜನೇಯ ದೇವಾಲಯ ಸಮಿತಿಯ ಕಾರ್ಯದರ್ಶಿ ಧನಂಜಯ,ರೈತಸಂಘದ ಕೆಂಕೆರೆ ಸತೀಶ್,ಟ್ರಾಕ್ಟರ್ ಮಂಜಣ್ಣ,,ಜಾವಿದ್, ಸೇರಿದಂತೆ ಹುಳಿಯಾರಿನ ಹಿಂದೂ ಹಾಗೂ ಮುಸ್ಲಿಂ ಸಮಾಜದ ವಿವಿಧ ಸಂಘಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.