ಸರ್ಕಾರಿ ವಾಹನ ದುರ್ಬಳಕೆ..

1564

ಬಳ್ಳಾರಿ /ಹೊಸಪೇಟೆ: ಸರ್ಕಾರಿ ಕೆಲಸಗಳನ್ನು ಸಲೀಸಾಗಿ ನಿರ್ವಹಿಸಲೆಂದು ಹಿರಿಯ ಅಧಿಕಾರಿಗಳಿಗೆ ನೀಡಿರುವ ವಾಹನಗಳು ಕಛೇರಿ ಕೆಲಸ ಕಾರ್ಯಗಳಿಗೆ ಬಳಸದೇ ತಮ್ಮ ಕುಟುಂಬ ಸದಸ್ಯರ ಶಾಪಿಂಗ್ ಸೇರಿದಂತೆ ಇತರ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ಥಳೀಯ ಕರ್ನಾಟಕ ರಾಜ್ಯ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ತಮ್ಮ ಕುಟುಂಬದ ಸದಸ್ಯರಿಗೆ ನಗರದಲ್ಲಿ ಶಾಪಿಂಗ್‌ಗೆ ತೆರಳಲು ಸರ್ಕಾರಿ ವಾಹನ ಬಳಸಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ನಗರದ ಕಾಲೇಜ್ ರಸ್ತೆಯಲ್ಲಿರುವ ಶಾಪಿಂಗ್ ಮಹಲ್‌ಗೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹ್ಮದ್ ಪೈಜ್ ಅವರ ಕುಟುಂಬ ಸದಸ್ಯರು ಎನ್‌ಇಕೆಎಸ್‌ಆರ್‌ಟಿಸಿ ಹಾಗೂ ಕರ್ನಾಟಕ ಸರ್ಕಾರ ನಾಮಫಲಕ ಹೊಂದಿದ ಟಾಟಾ ಇಂಡಿಗೋ ಸಿಎಸ್ ಏಸಿ ಕಾರಲ್ಲಿ ಆಗಮಿಸಿದ್ದರು. ಗಂಟೆಗೂ ಅಧಿಕ ಶಾಪಿಂಗ್‌ಗಾಗಿ ತೆರಳಿದರೂ ವಾಹನ್ ಕೂಲ್ ಇರಲೆಂದು ವಾಹನ ಚಾಲಕ ಇಂಜಿನ್ ಚಾಲನೆಯಲ್ಲಿಟ್ಟಿದ್ದನು. ಇದರಿಂದ ಸಾಕಷ್ಟು ಇಂಧನ ವ್ಯಯವಾಗಿದ್ದು ಕಂಡುಬಂದಿತು. ಸರಕಾರಿ ವಾಹನಗಳು ರಸ್ತೆಯಲ್ಲಿ ಗಂಟೆಗಟ್ಟಲೇ ಆನ್ ಆಗಿರುವುದನ್ನು ಕಂಡ ಸಾರ್ವಜನಿಕರು ದುರ್ಬಳಕೆ ಮಾಡಿಕೊಂಡ ಅಧಿಕಾರಿ ವಿರದ್ದ ಆಕ್ರೊಶ ವ್ಯಕ್ತಪಡಿಸಿದ ಘಟನೆ ನಡೆಯಿತು. ನಿತ್ಯ ಹಿರಿಯ ಅಧಿಕಾರಿಗಳ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು, ಪುನಃ ಕರೆತರಲು ಸರಕಾರಿ ವಾಹನಗಳ ಬಳಕೆಯಾಗುತ್ತಿರುವುದು ಕಂಡುಬರುತ್ತಿದೆ. ಮೇಲಾಧಿಕಾರಿಗಳ ಅಲಿಖಿತ ಆದೇಶವು ಇಲಾಖೆಯ ಸಿಬ್ಬಂದಿಗಳಿಗೆ ನುಂಗಲಾರದ ತುತ್ತಾಗಿದ್ದು ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಅಧಿಕಾರಿಗಳ ವೈಯುಕ್ತಿಕ ಕೆಲಸಗಳನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಮಾಡದಿದ್ದರೆ ಬೇರೆಡೆ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಇನ್ನಾದರೂ ಸರ್ಕಾರಿಯ ವಾಹನಗಳನ್ನು ಸರಕಾರಿ ಕೆಲಸಕ್ಕೆ ಮಾತ್ರ ಬಳಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಕಿಡಿಕಾರಿದರು.

ಸರಕಾರ ಸಾರ್ವಜನಿಕರ ಸೇವೆಗಾಗಿ ರಾಜ್ಯದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ವಾಹನ ಸೌಲಭ್ಯ ಕಲ್ಪಿಸಿದೆ. ಸರಕಾರದ ವಾಹನವನ್ನು ಅಧಿಕಾರಿಗಳು ತಮ್ಮ ಖಾಸಗಿ ಐಷರಾಮಿ ಬದುಕಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಮೇಲಿಂದ ಮೇಲೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ, ಇಂತಹ ಅಧಿಕಾರಿಗಳ ವಿರುದ್ದ ಸರಕಾರ ಸೂಕ್ತ ಕ್ರಮಕ್ಕೆ ಮುಂದಾಗುವುದೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.