ಸಂರಕ್ಷಣಾಧಿಕಾರಿಗೆ ಮನವಿ ಪತ್ರ.

405

ಬಳ್ಳಾರಿ/ಹೊಸಪೇಟೆ:ತುಂಗಭದ್ರಾ ನದಿ ತೀರದ ಕೆಲ ನಿಗಧಿತ ಪ್ರದೇಶವನ್ನು ನೀರು ನಾಯಿ ಪ್ರದೇಶ ಎಂದು ಸರ್ಕಾರ ಗುರುತಿಸಿದ್ದು, ಅವುಗಳ ಸಂರಕ್ಷಣೆಗಾಗಿ ಕಾವಲುಗಾರರ ನೇಮಕ ಮಾಡಬೇಕು ಎಂದು ಜನ ಸಂಗ್ರಾಮ ಪರಿಷತ್ ಮುಖಂಡ ಶಿವಕುಮಾರ ಮಾಳಗಿ ನೇತೃತ್ವದಲ್ಲಿ ಕಮಲಾಪುರ ಗಂಡುಗಲಿ ಕುಮಾರ ಯುವ ಸೇನೆ ಪದಾಧಿಕಾರಿಗಳು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ)ಅನುರೆಡ್ಡಿ ಇವರಿಗೆ ಮನವಿ ಸಲ್ಲಿಸಿದ್ದಾರೆ.

ಈಚೆಗೆ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ)ಅನುರೆಡ್ಡಿ ಹಂಪಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಮನವಿ ಸಲ್ಲಿಸಿದ ಶಿವಕುಮಾರ ಮಾಳಗಿ, ತುಂಗಭದ್ರಾ ಜಲಾಶಯದಿಂದ ಕಂಪ್ಲಿಯ ಸೇತುವೆಯ 34 ಕಿ.ಮಿ ವ್ಯಾಪ್ತಿಯ ಪ್ರದೇಶದಲ್ಲಿ ಅತಿ ಹೆಚ್ಚು ನೀರು ನಾಯಿಗಳು ಕಂಡು ಬಂದಿವೆ. ಈ ಪರಿಸರದಲ್ಲಿ ನೂರಾರು ಜಾತಿಯ ಮೀನುಗಳು, ಮೃದು ಚರ್ಮದ ನೀರು ನಾಯಿ, ಮೊಸಳೆ, ಮೃದು ಕವಚದ ದೈತ್ಯ ಆಮೆ (ಲಗಳಾ),  ವಿನಾಶದ ಅಂಚಿನಲ್ಲಿರುವ ಚೂಪು ತಲೆಯ ದೈತ್ಯ ಆಮೆ, ಹಾಲಾಮೆ, ಕಲ್ಲಾಮೆ, ಕಾಗೆ ಮೀನು, ಸೇರಿದಂತೆ ಇತರೆ ಜಲಚರ ಪ್ರಾಣಿಗಳು ಇಲ್ಲಿ ವಾಸಿಸುತ್ತಿದ್ದು, ಅವುಗಳ ರಕ್ಷಣೆಗಾಗಿ 2012ರಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಅದರಂತೆ ಇಲ್ಲಿನ ವನ್ಯಜೀವಿ ಸಂಪತ್ತನ್ನು ಪರಿಶೀಲಿಸಿ ನಂತರ 2015ರಲ್ಲಿ ಸುಮಾರು 34 ಕಿ.ಮಿ ನದಿ ಪ್ರದೇಶವನ್ನು ನೀರು ನಾಯಿ ಸಂರಕ್ಷಣ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಅವುಗಳ ಸಂರಕ್ಷಣೆಗಾಗಿ ಕೂಡಲೇ ಕೂಡಲೇ ಕಾವಲುಗಾರರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಕುಪೇಂದ್ರ ನಾಯಕ, ಪ್ರಸಾದ್, ನಾಗರಾಜ, ಮಾಳ್ಗಿ ತಿಮ್ಮಣ್ಣ ನಾಯಕ, ತಿಪ್ಪೇಶ್, ಮೌಲಾಲಿ ಹಾಗೂ ರಾಜಕುಮಾರ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.