ಕೆಂಪೇಗೌಡರ ಜಯಂತ್ಯೋತ್ಸವ ಆಚರಣೆ..

241

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಸಮಾಜದಲ್ಲಿರುವ ಎಲ್ಲಾ ವರ್ಗಗಳಿಗೆ ಸಮಬಾಳು ಸಮಪಾಲು ನೀಡುವ ಸಾಮಾಜಿಕ ನೀತಿಯನ್ನು ಅನುಸರಿಸಿದ ನಾಡಪ್ರಭು ಕೆಂಪೇಗೌಡ ಆಡಳಿತ ದೇಶಕ್ಕೆ ಮಾದರಿ ಎಂದು ಸವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾ.ಗೋಪಾಲಗೌಡ ಅಭಿಪ್ರಾಯಪಟ್ಟರು.

ನಗರದ ಹೊರವಲಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆದ 508ನೇ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಾಡಪ್ರಭು ಎಂದಿಗೂ ಆಡಳಿತ ನಡೆಸಿಲ್ಲ ನಾಡಿನ ಸರ್ವಾಂಗೀಣದ ಅಭಿವೃಧ್ಧಿಯೇ ಅವರ ಮೂಲ ಯೋಜನೆಯಾಗಿತ್ತು ಅನ್ನದಾತನಾಗಿರುವ ರೈತಪರವಾದ ಆಡಳಿತ ನಡೆಸಿದ್ದ ರಾಜಕೀಯ ಮುತ್ಸದ್ದಿಗಳಾದ ಅವರ ಜೀವನಾದರ್ಶ ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಬೇಕೆಂದ ನ್ಯಾಯಮೂರ್ತಿಗಳು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡಿ ಮೂಲಭೂತ ಮತ್ತು ಮಾನವ ಹಕ್ಕುಗಳಿಗೆ ಚ್ಯೂತಿ ತರಲು ಸಂವಿಧಾನದಲ್ಲಿ ಅವಕಾಶ ಇಲ್ಲ ಈ ದೇಶಕ್ಕಾಗಿ ಜೀವವನ್ನು ತ್ಯಾಗ ಮಾಡಿ ಇಲ್ಲಿಯೆ ನೆಲೆಸಿರುವ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂರನ್ನು ಮೂಲೆಗುಂಪು ಜಾತಿ-ಧರ್ಮದ ಹೆಸರಿನಲ್ಲಿ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಹೊರಟಿರುವ ರಾಜಕೀಯ ಶಕ್ತಿಗಳಿಂದ ದೂರ ಉಳಿದು ಸ್ವಾತಂತ್ರ್ಯ ರಕ್ಷಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಯುವಕರು ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಆದರೆ ಪ್ರಭುಗಳು(ರೈತರು) ಬೆಳೆಸುವ ಆಹಾರ ಉತ್ಪನ್ನಗಳಿಗೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಕನಿಷ್ಠ ಬೆಲೆ ನಿಗಧಿಗೊಳಿಸಲು ಆಳಿರುವ ಸರಕಾರದ ಪ್ರತಿನಿಧಿಗಳಿಂದ ಸಾಧ್ಯವಾಗುತ್ತಿಲ್ಲ ಅವರಿಗೆ ಕನಿಷ್ಠ ಇಚ್ಛಾಶಕ್ತಿ ಇಲ್ಲವೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿ ಹಿಗ್ಗಮುಗ್ಗಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ಈ ದೇಶದ ಕೋಟ್ಯಾಂತರ ಜನರಿಗೆ ಆಹಾರ ನೀಡುವ ರೈತರ ಸಾಲವನ್ನು ಮನ್ನಾ ಮಾಡಲು ಮೀನಾಮೇಷ ಮಾಡಲಾಗುತ್ತದೆ ಮದ್ಯದ ದೊರೆಗಳ ಸಾಲವನ್ನು ಮನ್ನಾ ಮಾಡಿ ಸಹಕಾರ ನೀಡುತ್ತಾರೆ ಇಂತಹ ನೀತಿಗೆಟ್ಟ ರಾಜಕೀಯ ವ್ಯವಸ್ಥೆಯ ವಿರುಧ್ಧ ಸಿಡಿದೇಳಬೇಕೆಂದ ನ್ಯಾಯಾಧೀಶರು ಬ್ಯಾಂಕ್‍ಗಳು ರಾಷ್ಟ್ರೀಯಕರಣಗೊಂಡರು ಸಹ ರೈತರು 10 ಲಕ್ಷ ರೂಗಳ ಸಾಲಕ್ಕಾಗಿ ಬ್ಯಾಂಕ್‍ಗಳಿಗೆ ಅಲೆದಾಡುವ ಪರಿಸ್ಥಿತಿಗೆ ಇನ್ನೂ ಮುಕ್ತಿ ಸಿಗಲಿಲ್ಲ ಇದು ನಮ್ಮ ದೌರ್ಭಾಗ್ಯವೆಂದು ಕಳವಳ ವ್ಯಕ್ತಪಡಿಸಿ ಸಂವಿಧಾನತ್ಮವಾಗಿ ದೇಶದ ಪ್ರತಿಯೊಬ್ಬರ ಪ್ರಜೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯುವಕರು ಕಾರ್ಯನಿರ್ವಹಿಸಬೇಕಾಗಿದೆ ರೈತರಿಂದ ಜೀವನ ನಡೆಸುತ್ತಿರುವ ರಾಜಕಾರಣಿಗಳಿಗೆ ಮತ್ತು ಬಂಡವಾಳಶಾಹಿಗಳ ಪರವಾಗಿರುವ ಸರಕಾರಗಳ ಕಣ್ಣುತೆರೆಸುವ ಕೆಲಸವನ್ನು ಮಾಡಲು ಸಜ್ಜಾಗಬೇಕೆಂದರು.

ಬಡಜನರ-ರೈತರನ್ನು ಸುಲಿಗೆ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳು: ದೇಶದ ರಾಜಕೀಯ ವ್ಯವಸ್ಥೆ ಮತ್ತು ನೀತಿಗಳ ವಿರುಧ್ಧ ಹರಿಹಾಯ್ದ ನ್ಯಾಯಮೂರ್ತಿಗಳು ನಾಡಿನ ಅಭಿವೃಧ್ಧಿಗಾಗಿ 508 ವರ್ಷಗಳ ಹಿಂದೆಯೇ ಯೋಚನೆ ಮಾಡಿ ಅನುಷ್ಠಾನಗೊಳಿಸಿದ ನಾಡಪ್ರಭುಗಳ ಆಡಳಿತ ವ್ಯವಸ್ಥೆಯನ್ನು ಇಂದಿಗೂ ಸಹ ರಾಜಕಾರಣಿಗಳು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಎಂದ ಅವರು ಈ ದೇಶದ ಬೆನ್ನೆಲುಬು ಆಗಿರುವ ರೈತರ ಮಕ್ಕಳು ಶೈಕ್ಷಣಿಕವಾಗಿ ಅಭಿವೃಧ್ಧಿ ಹೊಂದಲು ಸಮರ್ಪಕವಾದ ಅವಕಾಶಗಳು ಲಭಿಸುತ್ತಿಲ್ಲ ಉನ್ನತ ಶಿಕ್ಷಣ ಬಡವರು-ರೈತರ ಮಕ್ಕಳ ಪಾಲಿಗೆ ಗಗನಕುಸುಮವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಕೆಲವೊಂದು ಮಠಗಳು ಶಿಕ್ಷಣದ ಹಸರಿನಲ್ಲಿ ಹಗಲುದರೋಡೆ ಮಾಡುತ್ತಿದ್ದಾರೆ ಸಿಎಂ ಸಿದ್ದರಾಮಯ್ಯನವರು ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಲು ಮುಂದಾಗಬೇಕೆಂದು ಒತ್ತಾಯಿಸಿದರು.

ನೀರಿಗಾಗಿ ಹೋರಾಟ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ,ಹಣ್ಣುಹೂ,ರೇಷ್ಮೆ ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಖ್ಯಾತಿ ಹೊಂದಿರುವ ಅವಿಭಜಿತ ಕೋಲಾರ ಜಿಲ್ಲೆಯನ್ನು ಸರಕಾರ ಕಡೆಗಣಿಸಿದೆ ಈ ಭಾಗದ ರೈತರು ಮತ್ತು ನಾಗರಿಕರು ನೀರಿಗಾಗಿ ಪರದಾಡುತ್ತಿದ್ದಾರೆ ಯಾವುದೇ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಜನರಿಗೆ ಒದಗಿಸಲು ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆಗಳು ಸತ್ತುಹೋಗಿವೆ ಎಂದು ಕಿಡಿಕಾರಿದ ನ್ಯಾಯಮೂರ್ತಿಗಳು ಒಕ್ಕಲಿಗೆ ಸಮುದಾಯ ಮತ್ತು ಇನ್ನಿತರೆ ಸಮಾಜದ ಯುವಕರು ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಠಿಯಿಂದ ಪರಿಸರ ಸಂರಕ್ಷಣೆ ಮತ್ತು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ತೀವ್ರವಾದ ಹೋರಾಟಕ್ಕೆ ಸಜ್ಜಾಗ ಅವಳಿ ಜಿಲ್ಲೆಯ ಸ್ವರೂಪ ಬದಲಾಯಿಸಲು ಧೃಡಸಂಕಲ್ಪ ಮಾಡಬೇಕೆಂದ ನ್ಯಾಯಾಧೀಶರು ಮೌಲ್ಯಾಧಾರಿತ ರಾಜಕಾರಣ ನೀರಾವರಿ,ಆರ್ಥಿಕಾಭಿವೃಧ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ನಾನು ಸಹ ನಿಮ್ಮೊಂದಿಗೆ ಸಿದ್ದನಾಗಿದ್ದೇನೆ ನನ್ನ ಬದುಕು ನಿಮಗಾಗಿ ಮುಡಾಪಾಗಿಟ್ಟಿದ್ದೇನೆ ರಾಜ್ಯದ ಹಿತಾಸಕ್ತಿ ಮತ್ತು ಅವಭಜಿತ ಕೋಲಾರ ಜಿಲ್ಲೆಯ ಅಭಿವೃಧ್ಧಿ ಮತ್ತು ಹಕ್ಕುಗಳ ಬಗ್ಗೆ ಹೋರಾಟ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಇತ್ತೀಚಿಗೆ ಪಶ್ಚಿಮಬಂಗಾಲದ ದಾರ್ಜಿಲಿಂಗ್‍ನಲ್ಲಿ ಹುತಾತ್ಮರಾದ ಗಂಗಾಧರ್ ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರಧ್ದಾಂಜಲಿ ಸಲ್ಲಿಸಲಾಯಿತು ಜೊತೆಗೆ ಗಂಗಾಧರ್ ಅವರ ಪತ್ನಿಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್‍ನಾರಾಯಣ ಚಾರಿಟಬಲ್ ಟ್ರಸ್ಟ್ ಮೂಲಕ ಜೆ.ಡಿ.ಎಸ್ ಮುಖಂಡ ಮೇಲೂರು ರವಿಕುಮಾರ 2 ಲಕ್ಷ ರೂಗಳ ಚೆಕ್ ಮೂಲಕ ಆರ್ಥಿಕ ನೆರವು ನೀಡಿದರು.

ಜಯಂತಿ ಕಾರ್ಯಕ್ರಮದ ಅಂಗವಾಗಿ ನಗರದ ಸಾರಿಗೆ ಬಸ್ ನಿಲ್ದಾಣದಿಂದ ಕಲಾತಂಡಗಳು-ಆಕರ್ಷಕ ಸ್ತಬ್ಧಚಿತ್ರಗಳ ಮತ್ತು ಪಲ್ಲಕ್ಕಿ ಮೆರವಣಿಗೆ ಚಾಲನೆ ನೀಡಲಾಯಿತು ಕಲಾವಿದರು ಜನಾಕರ್ಷಕ ಮೈನವಿರೇಳಿಸುವ ಕಣ್ಮನ ಸೆಳೆಯುವ ಕಲೆಯನ್ನು ನೋಡುತ್ತಾ ನಾಗರಿಕರು ದಂಗಾದರು ತಮಟೆಯ ಸದ್ದು ಮತ್ತು ಕಲಾವಿದರ ಆಕರ್ಷಕ ಪ್ರದರ್ಶನದಿಂದ ಮನಸೋತ ರಾಜಕೀಯ ನಾಯಕರು ಕುಣಿದು ಕುಪ್ಪಳಿಸುವ ಮೂಲಕ ಕೆಂಪೇಗೌಡ ಜಯಂತ್ಯೋತ್ಸವವನ್ನು ಹಬ್ಬದ ಮಾದರಿಯಲ್ಲಿ ಆಚರಣೆ ಮಾಡಿ ಹರ್ಷ ವ್ಯಕ್ತಪಡಿಸಿದರು.

ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಕುಮಾರ ಚಂದ್ರಶೇಖರ್‍ನಾಥ್ ಸ್ವಾಮಿಜೀ ದಿವ್ಯಸಾನಿಧ್ಯವಹಿಸಿ ಒಕ್ಕಲಿಗ ಸಮಾಜದವರು ಎಲ್ಲಾ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೀವನ ನಡೆಸಬೇಕೆಂದು ಸಲಹೆ ನೀಡಿ ಗ್ರಾಮದಲ್ಲಿ ವೈಷಮ್ಯ ಮತ್ತು ಅಸೂಯೆಗಳಿಗೆ ಅವಕಾಶ ನೀಡದೆ ಸಂಘಟಿತರಾಗಿ ನಾಡಪ್ರಭು ಕೆಂಪೇಗೌಡನವರ ಜೀವನಾದರ್ಶಗಳನ್ನು ಮೈಗೂಡಿಸಿಕೊಂಡು ಸಮೃಧ್ಧ ಶಾಂತಿಯ ನಾಡನ್ನು ಬೆಳೆಸಿ ಕ್ಷೇತ್ರದಲ್ಲಿ ಸಂಘಟಿತರಾಗಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಳ್ಳಬೇಕೆಂದು ಮುಖಂಡರಿಗೆ ಕಿವಿಮಾತು ಹೇಳಿದರು.
ಖಾದಿ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ರಮೇಶ್,ಶಾಸಕ ಎಂ.ರಾಜಣ್ಣ,ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸತೀಶ್ ಮಾತನಾಡಿ ಕೆಂಪೇಗೌಡ ಜಯಂತಿಯನ್ನು ಸರಕಾರದ ಮಟ್ಟದಲ್ಲಿ ಆಚರಣೆಗೆ ಅದೇಶಿಸಿರುವುದಕ್ಕೆ ಸರಕಾರವನ್ನು ಅಭಿನಂದಿಸಿ ದಾನ ಮಾಡುವ ಒಕ್ಕಲಿಗರು ಸಣ್ಣ ಪುಟ್ಟ ಭಿನ್ನಾಭಿಪ್ರಾಯವನ್ನು ಮರೆತು ಸಂಘಟಿತರಾಗಬೇಕೆಂದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ,ತಹಶೀಲ್ದಾರ್ ಅಜೀತ್ ಕುಮಾರ್ ರೈ,ಕರ್ಣಶ್ರೀ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಡಿ.ಆರ್.ಶಿವಕುಮಾರಗೌಡ,ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮಚಂದ್ರ, ಜೆ.ಡಿ.ಎಸ್ ಯುವ ಮುಖಂಡ ಮೇಲುರು ರವಿಕುಮಾರ್, ಮೇಲೂರು ಗ್ರಾಮ ಪಂಚಾಯತಿ ಮುಂತಾದವರು ಇದ್ದರು..