ತರಬೇತುದಾರರ ತರಬೇತಿ ಶಿಬಿರ.

162

ಬಳ್ಳಾರಿ /ಹೊಸಪೇಟೆ:ಉತ್ತಮ ಸಮಾಜ ನಿರ್ಮಾಣ ಹಾಗು ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳು ತಲುಪಬೇಕಾದರೆ ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎಂದು ತಾಲೂಕಿನ ಬಿಸಿ ಊಟ ಯೋಜನೆಯ ಉಪ ನಿರ್ದೇಶಕ ಪಧ್ಮನಾಭ ಕರ್ಣಂ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯ ವಿದ್ಯಾರಣ್ಯ ಸಭಾಂಗಣದಲ್ಲಿ ತಾಲೂಕು ಲೋಕ ಶಿಕ್ಷಣ ಸಮಿತಿ, ಸಾಕ್ಷರ ಭಾರತ್ ಮತ್ತು ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುಖ್ಯ ತರಬೇತುದಾರರ ತರಬೇತಿ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜನರ ಸಾಮಾಜಿಕ, ಆರ್ಥಿಕ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಅಗತ್ಯವಾಗಿದೆ. ಹೈದ್ರಾಬಾದ್ ಕರ್ನಾಟಕದ ೬ ಜಿಲ್ಲೆಗಳ ೯೯೯ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು ೨೨ ಕೋಟಿ ರು.ಗಳ ಅನುದಾನದಲ್ಲಿ ಅನಕ್ಷರಸ್ಥರನ್ನು ಗುರುತಿಸಿ, ಅವರನ್ನು ಸಾಕ್ಷರರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಸಾಕ್ಷರ ಭಾರತ ತಾಲೂಕು ಸಂಯೋಜಕ ಹಾಗು ಸಂಪನ್ಮೂಲ ವ್ಯಕ್ತಿ ವರಪ್ರಸಾದ್ ಮಾತನಾಡಿ, ಹೈದ್ರಾಬಾದ್ ಕರ್ನಾಟಕದ ೬ ಜಿಲ್ಲೆಗಳಲ್ಲಿನ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಉದ್ದೇಶದಿಂದ, ಹೈ.ಕ.ಅನುದಾನದಡಿಯಲ್ಲಿ ಸಾಕ್ಷರ ಭಾರತ-೨೦೧೭ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಶಿಕ್ಷಕರು ತಾಲೂಕಿನ ೨೩ ಗ್ರಾಮ ಪಂಚಾಯಿತಿಗಳಲ್ಲಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬ ಸ್ವಯಂ ಸೇವಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಸ್ವಯಂ ಸೇವಕರು ೧೦ ಜನರನ್ನು ಸಾಕ್ಷರರನ್ನಾಗಿ ಮಾಡುವ ಜವಾಬ್ದಾರಿ ಇರುತ್ತದೆ. ಇವರ ಮೇಲೆ ತಾಲೂಕಿನ ಮೇಲ್ವಿಚಾರಕರು ಗಮನ ಹರಿಸುತ್ತಾರೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ ಎಚ್. ರಾಮಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಜತ್ತಿ, ನೌಕರ ಸಂಘದ ಎಚ್. ಜಾಕೀರ್ ಹುಸೇನ್, ಬಡ್ತಿ ಮುಖ್ಯಗುರು ಮಕ್ತುಂಬಿ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಸಂಪೂನ್ಮೂಲ ವ್ಯಕ್ತಿಗಳಾದ ಮಂಜಪ್ಪ ರಂಗಪ್ಪನವರ, ಶಂಕರನಾಯ್ಕ್ ತರಬೇತಿ ನೀಡಿದರು.